×
Ad

ನಾಳೆ ಕೇಂದ್ರ ಮುಂಗಡ ಪತ್ರ ಮಂಡನೆ

Update: 2021-01-31 23:13 IST

ಹೊಸದಿಲ್ಲಿ, ಜ. 31: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಸರಕಾರದ ಮುಂಗಡ ಪತ್ರವನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಸೋಮವಾರ ಪೂರ್ವಾಹ್ನ 11 ಗಂಟೆಗೆ ಮಾಡಲಿರುವ ಬಜೆಟ್ ಭಾಷಣದ ಬಗ್ಗೆ ಈಗ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತೀವ್ರ ಕುಸಿತಕ್ಕೊಳಗಾಗಿರುವ ಆರ್ಥಿಕತೆಗೆ ಈ ಬಜೆಟ್ ಪುನಶ್ಚೇತನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಮೇ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿ ಅಧಿಕಾರಕ್ಕೇರಿದ ಮೋದಿ ಸರಕಾರದ ಮೂರನೇ ಮುಂಗಡ ಪತ್ರ ಇದಾಗಿದೆ.ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ.

ಮುಂಗಡ ಪತ್ರದ ನಿರೀಕ್ಷೆಗಳು

ಮೂಲಸೌಕರ್ಯ, ಆರೋಗ್ಯ ಸೇವೆ, ಕೃಷಿ, ಗ್ರಾಮೀಣ ಆರ್ಥಿಕತೆ ಹಾಗೂ ಕೊರೋನ ಸಾಂಕ್ರಾಮಿಕ ರೋಗ, ಲಾಕ್‌ಡೌನ್‌ನಿಂದ ಕುಸಿತಕ್ಕೊಳಗಾದ ಕ್ಷೇತ್ರಗಳ ಮೇಲೆ ಈ ಬಜೆಟ್ ಗಮನ ಕೇಂದ್ರೀಕರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ನಾಶವನ್ನು ಸರಿಪಡಿಸುವ ಆರಂಭಿಕ ಹಂತ ಇದಾಗಲಿದೆ.

ಕೇವಲ ಲೆಕ್ಕಾಚಾರಗಳ ಕಡತ ಹಾಗೂ ಹಳೆಯ ಯೋಜನೆಗಳಿಗೆ ಹೊಸ ರೂಪದಲ್ಲಿ ನೀಡುವ ಬದಲು, ಅದಕ್ಕಿಂತಲೂ ಮೀರಿದ ನಿರೀಕ್ಷೆಯನ್ನು ಈ ಬಜೆಟ್ ಹೊಂದಿದೆ ಎಂದು ಆರ್ಥಿಕ ಶಾಸ್ತ್ರಜ್ಞರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಲ ‘ಪೇಪರ್‌ಲೆಸ್’ ಬಜೆಟ್

ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಂಪ್ರದಾಯವನ್ನು ಮುರಿದು ಕಾಗದ ರಹಿತ ಬಜೆಟ್ ಮಂಡಿಸುತ್ತಿರುವುದರಿಂದ ಈ ವರ್ಷದ ಬಜೆಟ್ ಅನನ್ಯವಾಗಲಿದೆ. ಭಾರತದ ಸ್ವಾತಂತ್ರ್ಯದ ಬಳಿಕ ಬಜೆಟ್ ಪತ್ರಗಳನ್ನು ಮುದ್ರಿಸದೇ ಇರುವುದು ಇದೇ ಮೊದಲು. ಸಾಮಾಜಿಕ ಸಂವಹನವನ್ನು ಕಡಿಮೆಗೊಳಿಸಲು ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News