​ಆಸ್ಪತ್ರೆಯಿಂದ ಬಿಡುಗಡೆ ಬೆನ್ನಲ್ಲೇ ರಾಜಕೀಯ ಬಿರುಗಾಳಿ ಎಬ್ಬಿಸಿದ ಶಶಿಕಲಾ!

Update: 2021-02-01 03:55 GMT

ಚೆನ್ನೈ, ಫೆ.1: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬೆಂಗಳೂರು ಆಸ್ಪತ್ರೆಯಿಂದ ರವಿವಾರ ಬಿಡುಗಡೆಯಾದ ವಿ.ಕೆ.ಶಶಿಕಲಾ ಅವರು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಳಸುತ್ತಿದ್ದ ಎಐಎಡಿಎಂಕೆ ಧ್ವಜ ಹೊಂದಿದ ಕಾರನ್ನು ಏರುವ ಮೂಲಕ ತಮಿಳುನಾಡು ರಾಜಕೀಯಕ್ಕೆ ಪ್ರಬಲ ಸಂದೇಶ ರವಾನಿಸಿದ್ದಾರೆ.

ಪಕ್ಷದ ಧ್ವಜವನ್ನು ಶಶಿಕಲಾ ಬಳಸಿರುವ ಬಗ್ಗೆ ಎಐಎಡಿಎಂಕೆಯ ಹಲವು ಮುಖಂಡರು ಆಕ್ಷೇಪಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅವರನ್ನು ಕಿತ್ತುಹಾಕಿರುವ ಕ್ರಮದ ಬಗೆಗಿನ ಚರ್ಚೆಗೆ ಈ ಬೆಳವಣಿಗೆ ಮತ್ತೆ ಜೀವ ನೀಡಿದೆ.

ಶಶಿಕಲಾ ಎಐಎಡಿಎಂಕೆ ಧ್ವಜ ಬಳಸಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕೀಲ ತಮಿಳುಮಣಿ, "ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಅವರನ್ನು ವಜಾಗೊಳಿಸಿದ ಸಂಬಂಧ ಸಲ್ಲಿಸಿರುವ ತಕರಾರು ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಅರ್ಜಿ ಸಲ್ಲಿಕೆ ವೇಳೆಯೇ ಎಐಎಡಿಎಂಕೆ ಧ್ವಜವನ್ನು ಬಳಸದಂತೆ ತಡೆಯಬಾರದು ಎಂದು ಕೋರಿ ಅವರು ಮಧ್ಯಂತರ ಆದೇಶ ಪಡೆದಿದ್ದರೆ ಅವರು ಇದೀಗ ಧ್ವಜ ಬಳಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ; ಪಕ್ಷದಿಂದ ಅವರನ್ನು ಉಚ್ಚಾಟಿಸಿರುವ ಹಿನ್ನೆಲೆಯಲ್ಲಿ ಅವರು ಪಕ್ಷದ ಧ್ವಜ ಬಳಸಲಾಗದು. ಎಲ್ಲಕ್ಕಿಂತ ಹೆಚ್ಚಾಗಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಓ.ಪನ್ನೀರಸೆಲ್ವಂ ಅವರ ನೇತೃತ್ವದ ಪಕ್ಷವನ್ನು ಅಧಿಕೃತವಾಗಿ ಎಐಎಡಿಎಂಕೆ ಎಂದು ಚುನಾವಣಾ ಆಯೋಗ ಮಾನ್ಯ ಮಾಡಿ ಚಿಹ್ನೆಯನ್ನೂ ನೀಡಿದೆ" ಎಂದು ವಿವರಿಸಿದರು.

ಪಕ್ಷದ ಹಿರಿಯ ಮುಖಂಡರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, "ಪಕ್ಷದ ಪ್ರಾಥಮಿಕ ಸದಸ್ಯರಿಗಷ್ಟೇ ಧ್ವಜ ಬಳಸಲು ಅವಕಾಶವಿದೆ. ಪಕ್ಷದ ನಿಯಮಾವಳಿ ಪ್ರಕಾರ ಪಕ್ಷದ ಆಂತರಿಕ ವಿಚಾರಗಳನ್ನು ನ್ಯಾಯಾಲಯಕ್ಕೆ ಒಯ್ಯಬಾರದು. ಹಾಗೆ ಮಾಡಿದಲ್ಲಿ ಅವರ ಪ್ರಾಥಮಿಕ ಸದಸ್ಯತ್ವ ರದ್ದಾಗುತ್ತದೆ. ಆದ್ದರಿಂದ ಶಶಿಕಲಾ ಕೋರ್ಟ್ ಕಟ್ಟೆ ಏರಿದ ತಕ್ಷಣ ಅವರ ಪ್ರಾಥಮಿಕ ಸದಸ್ಯತ್ವ ರದ್ದಾಗಿದೆ. ಆದ್ದರಿಂದ ಪಕ್ಷದ ಧ್ವಜ ಬಳಸಬಾರದು" ಎಂದು ಅಭಿಪ್ರಾಯಪಟ್ಟರು.

ಶಶಿಕಲಾ ಕ್ರಮವನ್ನು ಸಮರ್ಥಿಸಿರುವ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್, "ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಶಶಿಕಲಾ ಅವರನ್ನು 2016ರ ಡಿಸೆಂಬರ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಅವರನ್ನು ಹುದ್ದೆಯಿಂದ ಕಿತ್ತುಹಾಕುವ ಅಧಿಕಾರ ಯಾರಿಗೂ ಇಲ್ಲ. ಸಾಮಾನ್ಯ ಮಂಡಳಿ ಸಭೆ ಕರೆಯುವ ಅಧಿಕಾರ ಇರುವುದು ಪ್ರಧಾನ ಕಾರ್ಯದರ್ಶಿಗೆ ಮಾತ್ರ. ಅವರ ಅನುಪಸ್ಥಿತಿಯಲ್ಲಿ ಸಭೆ ಕರೆದು ಹುದ್ದೆಯಿಂದ ಕಿತ್ತು ಹಾಕಿರುವುದು ಕಾನೂನುಬಾಹಿರ. ಆದ್ದರಿಂದ ಅವರು ಪಕ್ಷದ ಧ್ವಜ ಬಳಸಬಹುದು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News