ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ
ಹೊಸದಿಲ್ಲಿ, ಫೆ.1: ದೇಶದಲ್ಲಿ ನಡೆಯುತ್ತಿರುವ ಕೊರೋನ ಲಸಿಕೆ ಅಭಿಯಾನಕ್ಕೆ ಈ ಬಾರಿಯ ಬಜೆಟ್‌ನಲ್ಲಿ 35,000 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣ ಇಳಿಮುಖವಾಗಿರುವುದು ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿದೆ. ದೇಶದಲ್ಲಿ ಕೊರೋನ ಸೋಂಕಿನ ಮರಣ ಪ್ರಮಾಣ ಒಂದು ಮಿಲಿಯ ಜನಸಂಖ್ಯೆಗೆ 112 ಆಗಿದ್ದು ಇದು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ದೇಶದಲ್ಲಿ ಕೊರೋನ ಚೇತರಿಕೆಯ ಪ್ರಮಾಣ 96.99 ಶೇ ಆಗಿದೆ. ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇದರಿಂದ ದೇಶದ ಪ್ರಜೆಗಳಷ್ಟೇ ಅಲ್ಲ, ಸುಮಾರು 100ಕ್ಕೂ ಅಧಿಕ ದೇಶಗಳ ಪ್ರಜೆಗಳ ಆರೋಗ್ಯ ರಕ್ಷಣೆ ಸಾಧ್ಯವಾಗಿದೆ. ಶೀಘ್ರವೇ ಇನ್ನೂ ಎರಡು ಲಸಿಕೆಗಳು ಲಭಿಸುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.
ಕೊರೋನ ಸಮಸ್ಯೆಯಿಂದ ಪಾತಾಳಕ್ಕೆ ಕುಸಿದಿರುವ ಭಾರತದ ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಿದ್ಧವಾಗಿದೆ. ವಿಶ್ವದಲ್ಲಿ ಅತ್ಯಧಿಕ ಕೊರೋನ ಸೋಂಕು ಪ್ರಕರಣಗಳಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತವು ಈಗ ತನ್ನ ಜಿಡಿಪಿಯ ಸುಮಾರು 1 ಶೇ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆರೋಗ್ಯಕ್ಷೇತ್ರಕ್ಕೆ ಬಜೆಟ್ ಅನುದಾನ 137 ಶೇ ಹೆಚ್ಚಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.