ದಿಲ್ಲಿಯ ರೈತರ ಪ್ರತಿಭಟನಾ ಸ್ಥಳಗಳಲ್ಲಿ ಇಂಟರ್ ನೆಟ್ ಸ್ಥಗಿತ ವಿಸ್ತರಿಸಿದ ಕೇಂದ್ರ
Update: 2021-02-01 15:56 IST
ಹೊಸದಿಲ್ಲಿ: ಗೃಹ ವ್ಯವಹಾರ ಸಚಿವಾಲಯವು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಘಾಝಿಪುರ ಹಾಗೂ ಟಿಕ್ರಿ ಗಡಿಗಳಲ್ಲಿ ಇಂಟರ್ ನೆಟ್ ಸೇವೆಗಳ ಸ್ಥಗಿತವನ್ನು ಮಂಗಳವಾರ ರಾತ್ರಿಯ ತನಕ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ನವೆಂಬರ್ ನಿಂದ ರೈತರು ಮೂರು ಗಡಿಭಾಗಗಳಲ್ಲದೆ ದಿಲ್ಲಿಯ ಆಸುಪಾಸಿನ ಪ್ರದೇಶಗಳಲ್ಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ದಿಲ್ಲಿಯ ನೆರೆಹೊರೆಯಲ್ಲೂ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜನವರಿ 31ರ ರಾತ್ರಿ 11ರಿಂದ ಫೆ.2ರ ರಾತ್ರಿ 11ರ ತನಕ ಇಂಟರ್ ನೆಟ್ ಸೇವೆ ಸ್ಥಗಿತಗೊಳ್ಳಲಿದೆ.
ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು(ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆ)ನಿಯಮಗಳು 2017ರ ಅಡಿಯಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸಲು ಈ ನಿರ್ದಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.