×
Ad

'ದಿ ಕಾರವಾನ್', 'ಕಿಸಾನ್ ಏಕ್ತಾ ಮೋರ್ಚಾ' ಸಹಿತ ಹಲವು ಟ್ವಿಟರ್ ಖಾತೆಗಳಿಗೆ ತಡೆ !

Update: 2021-02-01 17:02 IST

ಹೊಸದಿಲ್ಲಿ: 'ಕಾನೂನಾತ್ಮಕ ಬೇಡಿಕೆಗಳು'(ಲೀಗಲ್ ಡಿಮ್ಯಾಂಡ್) ಎಂಬ ಕಾರಣ ನೀಡಿ ಟ್ವಿಟರ್ ಇಂದು ಭಾರತದಲ್ಲಿ ಹಲವಾರು ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಿದೆ. ಹೀಗೆ ಬ್ಲಾಕ್ ಮಾಡಲ್ಪಟ್ಟ ಟ್ವಿಟರ್ ಹ್ಯಾಂಡಲ್‍ಗಳಲ್ಲಿ  'ದಿ ಕಾರವಾನ್', 'ಕಿಸಾನ್ ಏಕ್ತಾ ಮೋರ್ಚಾ', ಹೋರಾಟಗಾರ ಹಂಸರಾಜ್ ಮೀನಾ ಹಾಗೂ ಆಪ್ ಶಾಸಕ ಜರ್ನೈಲ್ ಸಿಂಗ್ ಅವರ ಟ್ವಿಟರ್ ಖಾತೆಗಳೂ ಸೇರಿರುವುದು ಗಮನಾರ್ಹ. ಈ ಬೆಳವಣಿಗೆ ಹಲವು ಟ್ವಿಟ್ಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸಿಪಿಐ(ಎಂ) ನಾಯಕ ಮುಹಮ್ಮದ್ ಸಲೀಂ, ಪತ್ರಕರ್ತೆ ಸಂಜುಕ್ತಾ ಬಸು ಸಹಿತ ಹಲವರ ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯಿದೆ.

'ಕಾನೂನಾತ್ಮಕ ಬೇಡಿಕೆ' ಏನು ಎಂಬುದು ತಿಳಿದಿಲ್ಲವಾದರೂ 'ದಿ ಕಾರವಾನ್ ಮ್ಯಾಗಝಿನ್' ಮುಖ್ಯಸ್ಥರು ಹಾಗೂ ಪತ್ರಕರ್ತರ ವಿರುದ್ಧ ಇತ್ತೀಚೆಗೆ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಟ್ರ್ಯಾಕ್ಟರ್ ಚಾಲಕನೊಬ್ಬನ ಸಾವಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡಿದ್ದಾರೆಂಬ ಆರೋಪದ ಮೇಲೆ ದಿಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಟ್ರ್ಯಾಕ್ಟರ್ ಚಾಲಕನಿಗೆ ಪೊಲೀಸರು ಗುಂಡಿಕ್ಕಿದ್ದರು ಎಂದು 'ದಿ ಕಾರವಾನ್' ಪ್ರತ್ಯಕ್ಷದರ್ಶಿ ರೈತರ ಹೇಳಿಕೆ ಆಧಾರದಲ್ಲಿ ಟ್ವೀಟ್ ಮಾಡಿತ್ತು ಎನ್ನಲಾಗಿದೆ.

ಕೃಷಿ ಕಾಯಿದೆಗಳ ವಿರುದ್ಧ ರೈತರ ಪ್ರತಿಭಟನೆಗಳ ಕುರಿತು ಟ್ವೀಟ್ ಮಾಡಿದ್ದ ರೈತ ಸಂಘಟನೆಗಳು, ಹೋರಾಟಗಾರರು ಹಾಗೂ ಕೆಲ ಮಾಧ್ಯಮಗಳ ಟ್ವಿಟರ್ ಹ್ಯಾಂಡಲ್‍ಗಳನ್ನು ಬ್ಲಾಕ್ ಮಾಡುವಂತೆ ಟ್ವಿಟರ್ ಗೆ ಭಾರತ ಸರಕಾರ ಕಾನೂನು ನೋಟಿಸ್ ಜಾರಿಗೊಳಿಸಿತ್ತೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News