×
Ad

ಟ್ರ್ಯಾಕ್ಟರ್ ರ‍್ಯಾಲಿ ಬಗ್ಗೆ ತಪ್ಪು ವರದಿ ಆರೋಪ: ‘ಆಜ್ ತಕ್’, ಕೇಂದ್ರಕ್ಕೆ ನೋಟಿಸ್ ನೀಡಿದ ಹೈಕೋರ್ಟ್

Update: 2021-02-01 20:45 IST

ಹೊಸದಿಲ್ಲಿ: ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ‘ಆಜ್ ತಕ್’ ಸುದ್ದಿವಾಹಿನಿಯೊಂದು ತಪ್ಪಾಗಿ ವರದಿ ಮಾಡಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಸೋಮವಾರ ಆಜ್ ತಕ್, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು Live Law ವರದಿ ಮಾಡಿದೆ.

ಪ್ರಸ್ತಾವಿತ ನಿಯಮಗಳ ಉಲ್ಲಂಘನೆಗೆ ಸೂಕ್ತ ಶಿಕ್ಷೆಯನ್ನು ನಿಗದಿಪಡಿಸುವುದು ಸೇರಿದಂತೆ ಕಾನೂನು, ಉತ್ತರದಾಯಿತ್ವ ಕ್ರಮಗಳ ಹಾಗೂ ಮಾರ್ಗಸೂಚಿ ಸೂತ್ರಗಳನ್ನು ರೂಪಿಸುವ ಮೂಲಕ ನಕಲಿ ಸುದ್ದಿಗಳನ್ನು ನಿಯಂತ್ರಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ರಾಜ್ಯಸಭಾ ಸಂಸದ ಸುಖದೇವ ಸಿಂಗ್ ದಿಂಡ್ಸಾ ಹಾಗೂ ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಮಂಜಿತ್ ಸಿಂಗ್ ಜಿಕೆ ಅವರು ನ್ಯಾಯಾಲಯಕ್ಕೆ ಈ ಕುರಿತು ಅರ್ಜಿ ಸಲ್ಲಿಸಿದ್ದರು.

ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿಯ ವೇಳೆ ನಡೆದಿದ್ದ ಹಿಂಸಾಚಾರದ ಕುರಿತ ಪರಿಶೀಲನೆ ನಡೆಸದ ವೀಡಿಯೊವನ್ನು ತನ್ನ ಸುದ್ದಿ ಚಾನೆಲ್ ಹಾಗೂ ಡಿಜಿಟಲ್ ಮಾಧ್ಯಮ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪ್ರಸಾರ ಮಾಡುವ ಮೂಲಕ ‘ಆಜ್ ತಕ್’ ಕೋಮುದಾಳಿ ಆರಂಭಿಸಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರು ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಸ್ತಬ್ದ ಚಿತ್ರಗಳನ್ನು ಕೆಡಿಸಲು ಹಾಗೂ ನಾಶಪಡಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ‘ಆಜ್ ತಕ್’ ವರದಿಗಾರ ಅರವಿಂದ್ ಓಜಾ ಅವರು ವೀಡಿಯೊದಲ್ಲಿ ಆರೋಪಿಸಿದ್ದರು. ಸುದ್ದಿವಾಹಿನಿಯ ಆರೋಪಗಳು ಸುಳ್ಳು, ಆಧಾರರಹಿತ ಹಾಗೂ ಕಲ್ಪನೆಯ ಮಿಶ್ರಣವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ ಎಂದು Bar and Bench ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News