ರೈಲ್ವೆ ಮುಂಗಡಪತ್ರ 2021: 1.15 ಲ.ಕೋ.ರೂ.ವೆಚ್ಚದ 10 ವರ್ಷಗಳ ಮಾರ್ಗಸೂಚಿ:

Update: 2021-02-01 15:56 GMT

ಹೊಸದಿಲ್ಲಿ,ಫೆ.1: ಸಂಸತ್ತಿನಲ್ಲಿ ಸೋಮವಾರ ಕೇಂದ್ರ ಮುಂಗಡ ಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ರೈಲ್ವೆಗಾಗಿ ಮುಂದಿನ ಹತ್ತು ವರ್ಷಗಳಲ್ಲಿ 1.15 ಲ.ಕೋ.ರೂ.ವೆಚ್ಚದ ರಾಷ್ಟ್ರೀಯ ರೈಲ್ವೆ ಯೋಜನೆಯನ್ನು ಪ್ರಕಟಿಸಿದರು.

2020ರಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕೆಲವು ತಿಂಗಳುಗಳ ಕಾಲ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಭಾರತೀಯ ರೈಲ್ವೆಯು ಅಪಾರ ನಷ್ಟವನ್ನು ಅನುಭವಿಸಿತ್ತು. ಭಾರತೀಯ ರೈಲ್ವೆಗಾಗಿ ಆದ್ಯತೆಗಳ ಬಗ್ಗೆ ಮಾತನಾಡಿದ ಸೀತಾರಾಮನ್ ಅವರು,ಸರಕುಗಳ ಸಾಗಾಣಿಕೆಗಾಗಿಯೇ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ಗಳ ಆರಂಭವನ್ನು ಪ್ರಸ್ತಾಪಿಸಿದರು. ಅವರ ಭಾಷಣದಲ್ಲಿ ರೈಲ್ವೆಗೆ ಸಂಬಂಧಿಸಿದ ಮುಖ್ಯಾಂಶಗಳು ಇಲ್ಲಿವೆ:

‘ಆತ್ಮನಿರ್ಭರ ಭಾರತ ’ವನ್ನು ಉತ್ತೇಜಿಸಲು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿತಗೊಳಿಸಲಾಗುವುದು.ಇದಕ್ಕಾಗಿ 2022ರ ವೇಳೆಗೆ ಸರಕುಗಳ ಸಾಗಾಣಿಕೆಗಾಗಿಯೇ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ಗಳನ್ನು ಆರಂಭಿಸಲಾಗುವುದು. ಈ ಕಾರಿಡಾರ್‌ಗಳ ಕೆಲವು ವಿಭಾಗಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿವೆ. ಕಾರಿಡಾರ್‌ಗಳು ಆರಂಭಗೊಂಡ ಬಳಿಕ ಅವುಗಳ ಆಸ್ತಿಗಳನ್ನು ನಗದೀಕರಿಸಲಾಗುವುದು.

2023,ಡಿಸೆಂಬರ್‌ನೊಳಗೆ ಬ್ರಾಡ್‌ಗೇಜ್ ಜಾಲವನ್ನು ಶೇ.100ರಷ್ಟು ವಿದ್ಯುದ್ದೀಕರಿಸಲಾಗುವುದು. ಪ್ರವಾಸಿ ಮಾರ್ಗಗಳಲ್ಲಿ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ರೈಲುಗಳಿಗೆ ನೂತನ ವಿಸ್ಟಾಡೋಮ್ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗುವುದು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರೈಲ್ವೆಯು ಕೈಗೊಂಡಿರುವ ಸುರಕ್ಷತಾ ಕ್ರಮಗಳು ನಿರೀಕ್ಷಿತ ಫಲಿತಾಂಶಗಳನ್ನು ನೀಡಿದ್ದು,ಸಂಚಾರ ದಟ್ಟಣೆಯ ಜಾಲಗಳಲ್ಲಿ ಮತ್ತು ಅತ್ಯಧಿಕವಾಗಿ ಬಳಕೆಯಾಗುವ ಮಾರ್ಗಗಳಲ್ಲಿ ರೈಲುಗಳ ಸುರಕ್ಷತೆಗಾಗಿ ಸ್ವದೇಶಿ ನಿರ್ಮಿತ ಢಿಕ್ಕಿ ನಿರೋಧಕ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.

ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಖಾಸಗಿ ರೈಲುಗಳನ್ನು ಓಡಿಸಲು ದೊಡ್ಡ ಪ್ರಮಾಣದಲ್ಲಿ ಖಾಸಗಿ ಕ್ಷೇತ್ರಗಳ ಸಹಭಾಗಿತ್ವವನ್ನು ಆಹ್ವಾನಿಸಲಾಗುವುದು. ಮಧ್ಯಪ್ರದೇಶದ ಹಬೀಬ್‌ಗಂಜ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಭಾರತದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯೋಜನೆಯ ನಿರ್ಮಾಣ ಕಾಮಗಾರಿಯ ಮೊದಲ ಹಂತವು ಸದ್ಯವೇ ಪೂರ್ಣಗೊಳಿಸಲಿದೆ. ಈ ವರ್ಷದ ಪೂರ್ವಾರ್ಧದಲ್ಲಿ 150 ಖಾಸಗಿ ರೈಲು ಯೋಜನೆಗಳಿಗಾಗಿ ಬಿಡ್‌ಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ರಾಷ್ಟ್ರೀಯ ರೈಲ್ವೆ ಯೋಜನೆಯಲ್ಲಿ ಅತ್ಯಂತ ಬೇಡಿಕೆಯಿರುವ ಮಾರ್ಗಗಳಲ್ಲಿ ಹೈ-ಸ್ಪೀಡ್ ರೈಲ್ವೆ ಸಂಪರ್ಕದ ಅಗತ್ಯವನ್ನು ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತಾವಿಸಲಾಗಿರುವ ಕೆಲವು ಮಾರ್ಗಗಳು:ದಿಲ್ಲಿ-ಅಯೋಧ್ಯೆ-ವಾರಣಾಸಿ, ಪಾಟ್ನಾ-ಗುವಾಹಟಿ, ವಾರಣಾಸಿ-ಪಾಟ್ನಾ, ಹೈದರಾಬಾದ್-ಬೆಂಗಳೂರು, ದಿಲ್ಲಿ-ಉದಯಪುರ-ಅಹ್ಮದಾಬಾದ್, ದಿಲ್ಲಿ-ಚಂಡಿಗಡ,ಮುಂಬೈ-ಹೈದರಾಬಾದ್,ಅಮೃತಸರ-ಜಮ್ಮು

ದಿಲ್ಲಿ-ವಾರಣಾಸಿ ಬುಲೆಟ್ ಟ್ರೇನ್‌ ಯೋಜನೆಯ ವಿವರವಾದ ಯೋಜನಾ ವರದಿಯನ್ನು ಪುನರ್‌ಪರಿಶೀಲನೆಗಾಗಿ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News