ದೇಶಾದ್ಯಂತ ಶನಿವಾರ ರಸ್ತೆ ತಡೆಗೆ ರೈತ ನಾಯಕರ ಕರೆ
ಹೊಸದಿಲ್ಲಿ: ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ಶನಿವಾರದಂದು ದೇಶಾದ್ಯಂತ ರಸ್ತೆ ತಡೆ ನಡೆಸಿ ಪ್ರತಿಭಟಿಸುವಂತೆ ಕರೆ ನೀಡಿದ್ದಾರೆ.
ಮಧ್ಯಾಹ್ನ 12ರಿಂದ 3 ಗಂಟೆಯ ತನಕ ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ. ಈ ಸಮಯದಲ್ಲಿ ಎಲ್ಲ ಸಾರಿಗೆ ವ್ಯವಸ್ಥೆ ಸ್ತಬ್ದಗೊಳ್ಳುವ ಸಾಧ್ಯತೆಯಿದೆ.
ಪ್ರತಿಭಟನಾಸ್ಥಳದ ಸುತ್ತಮುತ್ತ ಪ್ರದೇಶದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ, ಅಧಿಕಾರಿಗಳಿಂದ ಕಿರುಕುಳ, ಪ್ರತಿಭಟನಾಸ್ಥಳಗಳಲ್ಲಿನ ವಿದ್ಯುತ್ ಹಾಗೂ ನೀರು ಸರಬರಾಜನ್ನು ಮೊಟಕುಗೊಳಿಸಿರುವುದು ಸೇರಿದಂತೆ ಹಲವು ವಿಚಾರಗಳ ವಿರುದ್ದ ರಸ್ತೆ ತಡೆಗೆ ಕರೆ ನೀಡಲಾಗಿದೆ.
ಸೋಮವಾರ ಮಂಡನೆಯಾಗಿರುವ ಕೇಂದ್ರ ಬಜೆಟ್ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿರುವ ರೈತರು, ನಮ್ಮನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ.
ಸೋಮವಾರ ಸಂಜೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಈ ಘೋಷಣೆ ಮಾಡಿದೆ. ಗಣರಾಜ್ಯೋತ್ಸವದಂದು ಆಯೋಜಿಸಿದ್ದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಲವು ಗುಂಪು ಹಿಂಸಾಚಾರ ನಡೆಸಿದ್ದ ಕಾರಣ ಬಜೆಟ್ ದಿನವಾಗಿರುವ ಇಂದು ಸಂಸತ್ತಿನತ್ತ ರೈತರು ನಡೆಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ರದ್ದುಪಡಿಸಲಾಗಿತ್ತು.