×
Ad

ಗಣರಾಜ್ಯೋತ್ಸವ ಹಿಂಸಾಚಾರದಲ್ಲಿ ಭಾಗಿಯಾದ ಆರೋಪ: ಮತ್ತೆ 50 ಮಂದಿಗೆ ನೋಟಿಸು ಜಾರಿಗೊಳಿಸಿದ ದಿಲ್ಲಿ ಪೊಲೀಸ್

Update: 2021-02-01 21:55 IST

 ಹೊಸದಿಲ್ಲಿ, ಫೆ. 1: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ ಮತ್ತೆ 50ಕ್ಕೂ ಅಧಿಕ ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ದಿಲ್ಲಿ ಪೊಲೀಸರು ರವಿವಾರ ಹೇಳಿದ್ದಾರೆ.

ಪೊಲೀಸರು ಈಗಾಗಲೇ 44 ಜನರಿಗೆ ನೋಟಿಸ್ ರವಾನಿಸಿದ್ದಾರೆ.

ದಿಲ್ಲಿ ಹಿಂಸಾಚಾರದಲ್ಲಿ ಭಾಗವಹಿಸಿದ ಕೆಲವು ಟ್ರ್ಯಾಕ್ಟರ್‌ಗಳನ್ನು ಗುರುತಿಸಲಾಗಿದೆ. ಅದರ ಮಾಲಕರಿಗೆ ನೋಟಿಸ್ ರವಾನಿಸಲಾಗಿದೆ. ಈ ಘರ್ಷಣೆಯಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ದಿಲ್ಲಿಯ ನಿವಾಸಿಗಳಲ್ಲದೇ ಇರುವುದರಿಂದ ನೋಟಿಸು ನೀಡುವ ಪ್ರಕ್ರಿಯೆ ಸಮಯ ತೆಗೆದುಕೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 26ರ ವೀಡಿಯೊ ತುಣುಕನ್ನು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ತಂಡ ವಿಶ್ಲೇಷಣೆ ನಡೆಸುತ್ತಿದೆ ಎಂದು ಪೊಲೀಸ್ ಹೆಚ್ಚುವರಿ ಆಯುಕ್ತ (ಅಪರಾಧ) ಬಿ.ಕೆ. ಸಿಂಗ್ ಹೇಳಿದ್ದಾರೆ.

 ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ತಂಡ ದಿಲ್ಲಿಯ ವಿವಿಧ ಘಟನಾ ಸ್ಥಳಗಳಿಗೆ ಇಂದು ಭೇಟಿ ನೀಡಿದೆ. ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್ ಸಾರ್ವಜನಿಕರಿಂದ 5,000ಕ್ಕೂ ಅಧಿಕ ವೀಡಿಯೊ ತುಣುಕು ಹಾಗೂ ಭಾವಚಿತ್ರಗಳನ್ನು ಸ್ವೀಕರಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ಕುರಿತು ಯಾವುದೇ ಪುರಾವೆ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವಂತೆ ದಿಲ್ಲಿ ಪೊಲೀಸರು ಶುಕ್ರವಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

ಗಣರಾಜ್ಯೋತ್ಸವ ದಿನ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 84 ಮಂದಿಯನ್ನು ಬಂಧಿಸಲಾಗಿದೆ ಹಾಗೂ 38 ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಶನಿವಾರ ಹೇಳಿದ್ದರು. ಗುರುವಾರದ ವರೆಗೆ ಪೊಲೀಸರು 22 ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಿದ್ದರು. ಈ ನಡುವೆ ಉತ್ತರಪ್ರದೇಶ ಪೊಲೀಸರು ರಾಜ್ಯದ 200 ಟ್ರ್ಯಾಕ್ಟರ್ ಮಾಲಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಇದು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News