ಕೊರೋನ ಲಸಿಕೆ ಪಡೆದುಕೊಂಡ ಗಂಟೆಗಳಲ್ಲಿ ನೈರ್ಮಲ್ಯ ಕಾರ್ಮಿಕ ಸಾವು

Update: 2021-02-01 16:57 GMT

ವಡೋದರ, ಫೆ. 1: ಗುಜರಾತ್‌ನ ವಡೋದರ ಜಿಲ್ಲೆಯ 30 ವರ್ಷದ ನೈರ್ಮಲ್ಯ ಕಾರ್ಮಿಕನೋರ್ವ ರವಿವಾರ ಕೊರೋನ ಲಸಿಕೆ ತೆಗೆದುಕೊಂಡ 2 ಗಂಟೆಯಲ್ಲಿ ಮೃತಪಟ್ಟಿದ್ದಾರೆ.

 ಮೃತಪಟ್ಟ ನೈರ್ಮಲ್ಯ ಕಾರ್ಮಿಕನನ್ನು ಜಿಗ್ನೇಶ್ ಸೋಲಂಕಿ ಎಂದು ಗುರುತಿಸಲಾಗಿದೆ. ಅವರು ಗುಜರಾತ್‌ನ ವಡೋದರ ಮುನ್ಸಿಪಲ್ ಕಾರ್ಪೋರೇಶನ್‌ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಕೊರೋನ ಲಸಿಕೆ ತೆಗೆದುಕೊಂಡ ಕಾರಣದಿಂದ ಆತ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಸೋಲಂಕಿಯ ಕುಟುಂಬಿಕರು ಆರೋಪಿಸಿದ್ದಾರೆ. ಆದರೆ, ಆತ 2016ರಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಔಷಧ ತೆಗೆದುಕೊಂಡಿರಲಿಲ್ಲ. ಅವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಅವರು ಲಸಿಕೆ ತೆಗೆದುಕೊಳ್ಳಲು ಹೋಗುತ್ತಾರೆ ಎಂಬ ಕಲ್ಪನೆ ನನಗಿರಲಿಲ್ಲ. ನಾವು ಲಸಿಕೆ ಬಗ್ಗೆ ಚರ್ಚೆ ನಡೆಸಿದ್ದೆವು. ಲಸಿಕೆ ತೆಗೆದುಕೊಂಡ ಬಳಿಕ ಅವರು ಮನೆಗೆ ಹಿಂದಿರುಗಿದ್ದರು. ಪುತ್ರಿಯೊಂದಿಗೆ ಆಟವಾಡುತ್ತಿದ್ದಾಗ ಅಸ್ವಸ್ಥರಾದರು. ಕೊರೋನ ಲಸಿಕೆ ತೆಗೆದುಕೊಂಡ ಕಾರಣದಿಂದ ಅವರ ಹಠಾತ್ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಸೋಲಂಕಿ ಅವರ ಪತ್ನಿ ದಿವ್ಯಾ ಹೇಳಿದ್ದಾರೆ.

ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಆರಂಭಿಸಲಾಗಿದ್ದ ಬೂತ್‌ನಲ್ಲಿ ಸೋಲಂಕಿಗೆ ಕೊರೋನ ಲಸಿಕೆ ನೀಡಲಾಗಿತ್ತು. ಲಸಿಕೆ ನೀಡಿದ ಬಳಿಕ ಅರ್ಧ ಗಂಟೆಗಳ ಕಾಲ ನಿಗಾ ವಹಿಸಲಾಗಿತ್ತು. ಆದರೆ, ಆ ಅವಧಿಯಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ ಎಂದು ಎಸ್‌ಎಸ್‌ಜಿ ಆಸ್ಪತ್ರೆಯ ಡಾ. ರಂಜನ್ ಐಯ್ಯರ್ ಹೇಳಿದ್ದಾರೆ.

ಸೋಲಂಕಿ ಅವರು ಎದೆ ನೋವಿನಿಂದ ಬಳಲುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದುದರಿಂದ ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಅಯ್ಯರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News