ಕೇಂದ್ರ ಬಜೆಟ್:‌ ರೈಲ್ವೆಗೆ ದಾಖಲೆಯ 1.10 ಲಕ್ಷ ಕೋಟಿ ಅನುದಾನ

Update: 2021-02-01 17:21 GMT

ಹೊಸದಿಲ್ಲಿ, ಫೆ.1: ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೆಗೆ ದಾಖಲೆಯ 1.10 ಲಕ್ಷ ಕೋಟಿ ರೂ. ಅನುದಾನ ಘೋಷಿಸಿದ್ದು ಇದರಲ್ಲಿ 1.07 ಲಕ್ಷ ಕೋಟಿ ರೂ.ಯನ್ನು ಬಂಡವಾಳ ವೆಚ್ಚವಾಗಿ ಮೀಸಲಿರಿಸುವುದಾಗಿ ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿನ ಹಿನ್ನೆಲೆಯ ಲಾಕ್‌ಡೌನ್ ಅವಧಿಯಲ್ಲಿ ದೇಶದಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸಲು ರೈಲ್ವೇ ಇಲಾಖೆ ಉತ್ತಮ ಸೇವೆ ಸಲ್ಲಿಸಿದೆ ಎಂದವರು ಶ್ಲಾಘಿಸಿದ್ದಾರೆ. ಭಾರತೀಯ ರೈಲ್ವೆಯು ‘ರಾಷ್ಟ್ರೀಯ ರೈಲು ಯೋಜನೆ 2030’ನ್ನು ಸಿದ್ಧಪಡಿಸಿದೆ. ಸಾಗಣೆ ವೆಚ್ಚವನ್ನು ತಗ್ಗಿಸಿ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಭವಿಷ್ಯದ ರೈಲ್ವೆ ವ್ಯವಸ್ಥೆಯನ್ನು 2030ರೊಳಗೆ ರೂಪಿಸುವ ಯೋಜನೆ ಇದಾಗಿದೆ. ಈಸ್ಟರ್ನ್ ಆ್ಯಂಡ್ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್(ಇಡಿಎಫ್‌ಸಿ ಮತ್ತು ಡಬ್ಲ್ಯೂಡಿಎಫ್‌ಸಿ)ಗಳನ್ನು 2022ರ ಜೂನ್‌ನೊಳಗೆ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಇಡಿಎಫ್‌ಸಿಯ ಸೋನೆಗರ್-ಗೊಮೋಹ್ ವಿಭಾಗದ 263 ಕಿ.ಮೀ. ಅಭಿವೃದ್ಧಿ ಯೋಜನೆಯನ್ನು ಪಿಪಿಪಿ(ಸರಕಾರಿ-ಖಾಸಗಿ ಸಹಭಾಗಿತ್ವ)ದಡಿ ಈ ವರ್ಷವೇ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ಗೊಮೋಹ್-ದಂಕುಣಿ ವಿಭಾಗದ 274.3 ಕಿ.ಮೀ ಯೋಜನೆಯನ್ನೂ ರೈಲ್ವೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಖರಗಪುರದಿಂದ ವಿಜಯವಾಡದವರೆಗಿನ ಈಸ್ಟ್‌ಕೋಸ್ಟ್ ಸರಕು ಕಾರಿಡಾರ್ ಯೋಜನೆ, ಭುಸಾವಲ್-ಖರಗಪುರ-ದಂಕುಣಿವರೆಗಿನ ಈಸ್ಟ್ -ವೆಸ್ಟ್ ಸರಕು ಕಾರಿಡಾರ್ ಯೋಜನೆ, ಇಟಾರ್ಸಿ-ವಿಜಯವಾಡ ನಾರ್ತ್-ಸೌತ್ ಕಾರಿಡಾರ್ ಯೋಜನೆಯನ್ನೂ ರೈಲ್ವೇ ಇಲಾಖೆ ಕೈಗೆತ್ತಿಕೊಳ್ಳಲಿದೆ. ಪ್ರಥಮ ಹಂತದಲ್ಲಿ ವಿವರವಾದ ಯೋಜನಾ ವರದಿಯನ್ನು ರೂಪಿಸಲಾಗುವುದು. 2020ರ ಅಕ್ಟೋಬರ್ 1ರ ವೇಳೆಗೆ 41,548 ಕಿ.ಮೀ ಬ್ರಾಡ್‌ಗೇಜ್ ಹಳಿ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಂಡಿದ್ದರೆ, 2021ರ ಅಂತ್ಯದ ವೇಳೆಗೆ ಇದನ್ನು 46,000 ಕಿ.ಮೀಗೆ ಹೆಚ್ಚಿಸಲಾಗುವುದು. 2023ರ ಡಿಸೆಂಬರ್ ಅಂತ್ಯದ ವೇಳೆಗೆ 100 ಶೇ ಹಳಿ ವಿದ್ಯುದೀಕರಣದ ಗುರಿ ಹೊಂದಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ (ಈ ಬೋಗಿಗಳು ದೊಡ್ಡ ಗಾಜಿನ ಕಿಟಕಿಗಳು, ಗಾಜಿನ ಮೇಲ್ಛಾವಣಿ , ವೀಕ್ಷಣಾ ಕೋಣೆ ಹಾಗೂ ತಿರುಗಿಸಬಹುದಾದ ಆಸನಗಳನ್ನು ಹೊಂದಿರುತ್ತದೆ. ಪ್ರಯಾಣದ ಸಂದರ್ಭ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಇದು ಸೂಕ್ತವಾಗಿದೆ).

ಕಳೆದ 5 ವರ್ಷಗಳಲ್ಲಿ ರೈಲ್ವೇ ಇಲಾಖೆ ಅನುಸರಿಸಿದ ಸುರಕ್ಷತಾ ಕ್ರಮಗಳು ಫಲ ನೀಡುತ್ತಿವೆ. ಈ ಪ್ರಯತ್ನವನ್ನು ಮತ್ತಷ್ಟು ಬಲಗೊಳಿಸಲು, ಹೆಚ್ಚಿನ ಸಾಂದ್ರತೆಯ ಹಾಗೂ ಹೆಚ್ಚು ಬಳಕೆಯಾಗುವ ರೈಲು ಮಾರ್ಗಗಳಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದರಿಂದ ಮಾನವ ತಪ್ಪಿನಿಂದ ಆಗುವ ರೈಲು ಅಪಘಾತವನ್ನು ನಿವಾರಿಸಬಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News