ಪರಿಶಿಷ್ಟ ಜಾತಿ/ಪಂಗಡದವರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ: ಸರಕಾರದ ಮಾಹಿತಿ

Update: 2021-02-03 19:03 GMT

ಹೊಸದಿಲ್ಲಿ, ಫೆ.4: ದೇಶದಲ್ಲಿ ಪರಿಶಿಷ್ಟ ಜಾತಿ/ಪಂಗಡದವರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಕ್ರಮವಾಗಿ 7.3% ಮತ್ತು 26.5% ಹೆಚ್ಚಳವಾಗಿದೆ ಎಂದು ಬುಧವಾರ ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

ಸಂವಿಧಾನದ 7ನೇ ಅನುಚ್ಛೇದದ ಪ್ರಕಾರ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ನಾಗರಿಕರ ಆಸ್ತಿ ಮತ್ತು ಪ್ರಾಣ ರಕ್ಷಣೆ, ಪರಿಶಿಷ್ಟ ಜಾತಿ/ಪಂಗಡದವರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆ ಮತ್ತು ಕಾನೂನು ಪ್ರಕ್ರಿಯೆ ಆಯಾ ರಾಜ್ಯಗಳ ಜವಾಬ್ದಾರಿಯಾಗಿರುತ್ತದೆ ಎಂದು ಗೃಹ ಇಲಾಖೆಯ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ‘ಕ್ರೈಮ್ ಇನ್ ಇಂಡಿಯಾ-2019’ ವರದಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿದೆಯೇ ಎಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಲಿಖಿತ ಪ್ರಶ್ನೆ ಕೇಳಿದ್ದರು.

‘ಎಸ್ ಸರ್’ ಎಂದು ಉತ್ತರ ಆರಂಭಿಸಿದ ಸಚಿವ ರೆಡ್ಡಿ, ಪರಿಶಿಷ್ಟ ಜಾತಿ/ಪಂಗಡದವರ ಹಿತರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಸ್‌ಸಿ/ಎಸ್‌ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ (1989)ಯನ್ನು ಹೆಚ್ಚು ಪರಿಣಾಮಕಾರಿಯನ್ನಾಗಿಸಲು 2015ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯಲ್ಲಿ ಹೊಸ ಅಪರಾಧ ಪ್ರಕರಣ ಸೇರಿಸಿದ್ದು ಅಪರಾಧದ ಪರಿಕಲ್ಪನೆಯನ್ನು ವಿಸ್ತರಿಸಲಾಗಿದೆ. ವಿಶೇಷ ನ್ಯಾಯಾಲಯಗಳ ಸ್ಥಾಪನೆ, ವಿಶೇಷ ನ್ಯಾಯಾಲಯಗಳಿಗೆ ಹೆಚ್ಚಿನ ಅಧಿಕಾರ, ಆರೋಪಪಟ್ಟಿ ದಾಖಲಿಸಿದ 2 ತಿಂಗಳೊಳಗೆ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂಬ ಷರತ್ತು ಮುಂತಾದವುಗಳನ್ನು ತಿದ್ದುಪಡಿ ಕಾಯ್ದೆಯಲ್ಲಿ ಸೇರಿಸಲಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News