2,000ರೂ. ಕೊಟ್ಟರೆ ರಾಕೇಶ್ ಟಿಕಾಯತ್ ಎಲ್ಲಿಗೆ ಬೇಕಾದರೂ ಹೋಗುತ್ತಾರೆ: ಬಿಜೆಪಿ ಶಾಸಕ ಆರೋಪ
ಲಕ್ನೋ: ರೈತರ ಪ್ರತಿಭಟನೆಗೆ ತಮ್ಮ ಬೆಂಬಲಿಗರ ಜತೆ ಸೇರಿಕೊಂಡು ಅಡ್ಡಿ ಪಡಿಸಲು ಯತ್ನಿಸುತ್ತಿದ್ದಾರೆಂದು ಈ ಹಿಂದೆ ಪ್ರತಿಭಟನಾನಿರತ ರೈತರ ಆರೋಪ ಎದುರಿಸಿದ್ದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್, ದಿಲ್ಲಿ-ಉತ್ತರ ಪ್ರದೇಶ ಗಡಿಯಲ್ಲಿ ರೈತರ ಹೋರಾಟ ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ ವಿರುದ್ಧ ಹರಿಹಾಯ್ದಿದ್ದಾರೆ.
"ನಾನು ಕೂಡ ಒಬ್ಬ ರೈತ, ರಾಕೇಶ್ ಟಿಕಾಯತ್ ಅವರೇನೂ ನನಗಿಂತ ದೊಡ್ಡ ರೈತರಲ್ಲ. ನನ್ನ ಬಳಿ ಇರುವ ಅರ್ಧದಷ್ಟು ಜಮೀನು ಕೂಡ ಅವರ ಬಳಿ ಇಲ್ಲ, ನಾನು ತಿಕಾಯತ್ ಕುಟುಂಬವನ್ನು ಗೌರವಿಸುತ್ತೇನೆ. ಆದರೆ ಅವರು ಎರಡು ಸಾವಿರ ರೂಪಾಯಿಗಾಗಿ ಎಲ್ಲಿಗೆ ಬೇಕಾದರೂ ಹೋಗುತ್ತಾರೆಂದು ಜನರು ಆಡಿಕೊಳ್ಳುತ್ತಿದ್ದರು. ಇದು ದುರಾದೃಷ್ಟಕರ" ಎಂದು ಗುರ್ಜರ್ ಹೇಳಿದ್ದಾರೆ.
"ಅವರು ಹಾಗೆ ಮಾಡಬಾರದು, ಅವರು ಪ್ರತಿಭಟನೆಯನ್ನು ಎಲ್ಲಿಗೊಯ್ಯುತ್ತಿದ್ದಾರೆ? ಉಗ್ರರು ನಮ್ಮನ್ನು ಕೊಲ್ಲಲು ಬಂದರು ಎಂದು ನಾಳೆ ನೀವು ಹೇಳಬಹುದು, ಹಿಂಸೆಯನ್ನು ನಡೆಸುವುದು-ಇದು ಒಳ್ಳೆಯದಲ್ಲ," ಎಂದೂ ಗುರ್ಜರ್ ಹೇಳಿದ್ದಾರೆ.
ತಾವು ರೈತರ ಪ್ರತಿಭಟನೆಗೆ ಅಡ್ಡಿಯುಂಟು ಮಾಡಿಲ್ಲ ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಅವರು, ತಾವು ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ ಎಂದರು. "ಇದು ರೈತರ ಪ್ರತಿಭಟನೆ ಎಂದು ಯಾರು ಹೇಳುತ್ತಾರೆ? ಅಲ್ಲಿಗೆ ಹೋಗಿ ನೋಡಿ, ರಾಜಕೀಯ ಪಕ್ಷವೊಂದರ ನಾಲ್ಕು ಮಂದಿ ಅಲ್ಲಿ ಕುಳಿತಿದ್ದಾರೆ. ಇದು ರೈತರ ಪ್ರತಿಭಟನೆಯೇ? ಅಲ್ಲಿ ರಾಜಕೀಯ ಕಾರ್ಯಕರ್ತರು ಮಾತ್ರ ಇದ್ದಾರೆ. ಅವರು ರೈತರಾಗಿರಬಹುದು, ಕಾರ್ಮಿಕರಾಗಿರಬಹುದು" ಎಂದು ಗುರ್ಜರ್ ಹೇಳಿದರು.