"ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ನೀಡಿರುವ ಜಾಗ ನಮ್ಮದು": ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಇಬ್ಬರು ಮಹಿಳೆಯರು

Update: 2021-02-04 07:09 GMT

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ಮಂಜೂರು ಮಾಡಿದ ಐದು ಎಕರೆ ಜಮೀನಿನ ಮಾಲೀಕತ್ವ ಕುರಿತು ಇದೀಗ ವಿವಾದ ಸೃಷ್ಟಿಯಾಗಿದೆ. ದೆಹಲಿ ಮೂಲದ ಇಬ್ಬರು ಸಹೋದರಿಯರು ಬುಧವಾರ ಅಲಹಾಬಾದ್ ಹೈಕೋರ್ಟ್‌ಗೆ ಜಮೀನಿನ ಹಕ್ಕುಸ್ವಾಮ್ಯದ ಕುರಿತಾದಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
 
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದ ನೋಂದಾವಣೆಯಲ್ಲಿ ದಾಖಲಿಸಲಾಗಿದ್ದು, ಫೆಬ್ರವರಿ 8 ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮ್ಮ ತಂದೆ ಜ್ಞಾನ ಚಂದ್ರ ಪಂಜಾಬಿ 1947 ರಲ್ಲಿ ಪಂಜಾಬ್‌ನಿಂದ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಬಂದು ಫೈಜಾಬಾದ್ (ಈಗಿನ ಅಯೋಧ್ಯೆ) ಜಿಲ್ಲೆಯಲ್ಲಿ ನೆಲೆಸಿದ್ದರು ಎಂದು ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ ಮತ್ತು ರಾಮ ರಾಣಿ ಪಂಜಾಬಿ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ತಮ್ಮ ತಂದೆಗೆ ಧನ್ನಿಪುರ ಗ್ರಾಮದಲ್ಲಿ 28 ಎಕರೆ ಭೂಮಿಯನ್ನು ಐದು ವರ್ಷಗಳ ಕಾಲ ನಜುಲ್ ಇಲಾಖೆಯಿಂದ ಮಂಜೂರು ಮಾಡಲಾಗಿತ್ತು. ಬಳಿಕ ದಾಖಲೆಗಳಿಂದ ಅವರ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಹೆಸರನ್ನು ತೆಗೆದು ಹಾಕಿರುವ ಅಧಿಕಾರಿಯ ಆದೇಶದ ವಿರುದ್ಧ, ಅಯೋಧ್ಯೆಯ ಏಕೀಕರಣದ ವಸಾಹತು ಅಧಿಕಾರಿಯ ಮುಂದೆ ಮನವಿಯನ್ನು ನೀಡಲಾಗಿತ್ತು., ಆದರೆ ಈ ಅರ್ಜಿಯನ್ನು ಪರಿಗಣಿಸದೆ, ಅಧಿಕಾರಿಗಳು ತಮ್ಮ 28 ಎಕರೆ ಭೂಮಿಯಲ್ಲಿ ಐದು ಎಕರೆ ಭೂಮಿಯನ್ನು ಮಸೀದಿ ನಿರ್ಮಾಣಕ್ಕಾಗಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಅರ್ಜಿದಾರ ಮಹಿಳೆಯರು ತಿಳಿಸಿದ್ದಾರೆ. ವಸಾಹತು ಅಧಿಕಾರಿಯ ಮುಂದೆ ವಿವಾದ ಬಾಕಿ ಇರುವವರೆಗೂ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ಹಸ್ತಾಂತರಿಸುವುದನ್ನು ತಡೆಯಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News