ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ವಿರುದ್ಧ ಪ್ರಕರಣ ದಾಖಲಿಸಿದ ದಿಲ್ಲಿ ಪೊಲೀಸ್
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಹಿಂಸಾಚಾರ ಸಂದರ್ಭ ಹಾಕಿರುವ ಟ್ವಿಟರ್ ಪೋಸ್ಟ್ ಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಯಾನಾಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ತನ್ನ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಯೋಗಿತಾ ಭಯಾನಾ, ದಿಲ್ಲಿ ಪೊಲೀಸರು ನನ್ನ ಧ್ವನಿಯನ್ನು ಅಡಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ನೀಡಿರುವುದು ನಾನು ಮಾಡಿರುವ ಏಕೈಕ ‘ಅಪರಾಧ’ ಎಂದು ಹೇಳಿದ್ದಾರೆ.
ಯೋಗಿತಾ ಭಯಾನಾಗೆ ಪೊಲೀಸರ ಎದುರು ಹಾಜರಾಗುವಂತೆ ಸೂಚಿಸಿದ್ದಲ್ಲದೆ, ಭಾರತೀಯ ದಂಡ ಸಂಹಿತೆ ಹಲವು ಸೆಕ್ಷನ್ ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಮ್ಮ ಟ್ವಿಟರ್ ಖಾತೆಯಲ್ಲಿ ಎರಡು ನಕಲಿ ಪೋಸ್ಟ್ ಗಳು ಅಪ್ ಲೋಡ್ ಆಗಿರುವುದು ಕಂಡುಬಂದಿದೆ. ಅಪ್ ಲೋಡ್ ಮಾಡಿರುವ ಪೋಸ್ಟ್ ಗಳ ಮೂಲ ಹಾಗೂ ಕಾರಣ ತಿಳಿಸಬೇಕೆಂದು ಕೋರುತ್ತೇವೆ. ನೀವು ತನಿಖೆಗೆ ಯಾವ ದಿನಾಂಕ, ಸಮಯದಲ್ಲಿ ಎಲ್ಲಿ ಲಭ್ಯವಿರುತ್ತೀರಿ ಎಂದು ತಿಳಿಸಬೇಕು.ನೋಟಿಸ್ ಸ್ವೀಕರಿಸಿದ ಎರಡು ದಿನಗಳಲ್ಲಿ ಈ ಕುರಿತು ವಿವರ ಕುರಿತು ಉತ್ತರಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಹಿಂದಿಯಲ್ಲಿ ಟ್ವೀಟಿಸಿರುವ ಭಯಾನಾ, ದಿಲ್ಲಿ ಪೊಲೀಸರು ನನ್ನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲಿಸಿದ್ದು ನಾನು ಮಾಡಿರುವ ಅಪರಾಧ. ದಿಲ್ಲಿ ಪೊಲೀಸರು ನನ್ನ ಧ್ವನಿ ದಮನಿಸಲು ಬಯಸಿದ್ದಾರೆ ಎಂದು ಬರೆದಿದ್ದಾರೆ.