×
Ad

ಗಾಝಿಪುರ್ ಗಡಿಯಲ್ಲಿ ನೆಟ್ಟಿದ್ದ ಮುಳ್ಳುಗಳನ್ನು 'ತೆರವುಗೊಳಿಸುತ್ತಿರುವ' ಪೊಲೀಸರು ಹೇಳಿದ್ದೇನು?

Update: 2021-02-04 13:13 IST

ಹೊಸದಿಲ್ಲಿ:  ದಿಲ್ಲಿ-ಗಾಝಿಪುರ್ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರನ್ನು ತಡೆಯಲು ಪೊಲೀಸರು ರಸ್ತೆಗೆ ಹೊಡೆದಿದ್ದ ಮೊಳೆಗಳನ್ನು ತೆಗೆಯಲಾಗುತ್ತಿದೆ ಎಂಬಂತೆ ಬಿಂಬಿಸುವ ವೀಡಿಯೋಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ನಂತರ ಸ್ಪಷ್ಟೀಕರಣ ನೀಡಿರುವ ದಿಲ್ಲಿ ಪೊಲೀಸರು ಮೊಳೆಗಳನ್ನು ತೆಗೆಯಲಾಗುತ್ತಿಲ್ಲ, ಬದಲು ಸಾರ್ವಜನಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ಮರು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ರಾಜಧಾನಿಯಲ್ಲಿ ಗಣರಾಜ್ಯೋತ್ಸವ ದಿನಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಘಟನೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ರಸ್ತೆಗೆ ಮೊಳೆಗಳನ್ನು ಅಳವಡಿಸಲಾಗಿದೆಯೆಂದು ಪೊಲೀಸರು ಹೇಳುತ್ತಿದ್ದರಾದರೂ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಗಾಝಿಪುರ್‌ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಪೊಲೀಸರು ಮುಳ್ಳುಗಳನ್ನು ನೆಟ್ಟಿದ್ದರು. ಆದರೆ ಅದನ್ನು ತೆರವುಗೊಳಿಸುವ ವೀಡಿಯೋಗಳು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಸೋಮವಾರದಿಂದ ರೈತರ ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ ಹಾಗೂ ಗಝೀಪುರ್ ಪ್ರದೇಶಗಳು ವಸ್ತುಶಃ ಕೋಟೆಗಳಾಗಿ ಮಾರ್ಪಟ್ಟಿದ್ದು ಹಲವಾರು ಬ್ಯಾರಿಕೇಡುಗಳನ್ನು ಅಳವಡಿಸಲಾಗಿರುವ ಹೊರತಾಗಿ ಭದ್ರತಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ.

ರೈತರ ಪ್ರತಿಭಟನೆಗಳಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ  ಪರಿಸ್ಥಿತಿಯನ್ನು ಅವಲೋಕಿಸಲು ಡ್ರೋನ್‍ಗಳ ಸಹಾಯವನ್ನೂ ಪೊಲೀಸರು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News