×
Ad

ದೇಶದಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ 'ಎದ್ದೇಳಿ': ನಟಿ ಸೋನಾಕ್ಷಿ ಸಿನ್ಹಾ

Update: 2021-02-04 14:16 IST

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹಲವಾರು ಅಂತಾರಾಷ್ಟ್ರೀಯ ಗಣ್ಯರು ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದ ಹಲವು ಕ್ಷೇತ್ರಗಳ ಖ್ಯಾತನಾಮರು ಸರಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಲು ಪ್ರಾರಂಭಿಸಿದ್ದರು. ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ರೈತರ ಪರವಾಗಿ ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ರೈತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಕುರಿತಾದ ಪತ್ರಿಕಾ ವರದಿಯೊಂದನ್ನು ಪೋಸ್ಟ್ ಮಾಡುವುದರ ಜೊತೆಗೆ, "ಗ್ರೆಟಾ, ರಿಹಾನಾ ಸೇರಿದಂತೆ ಹಲವರು 'ಹೊರಗಿನವರು' ನಮ್ಮ ದೇಶ ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಅರ್ನಾಬ್ ಗೋಸ್ವಾಮಿ ಹೇಳುವುದನ್ನು ನಂಬುವ ಮೊದಲು ನೀವು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು."

"ಅವರಿಗೆ ಈ ಮೂರು ವಿವಾದಿತ ಕಾಯ್ದೆಯಲ್ಲಿರುವುದೇನು ಎಂದು ತಿಳಿಯದೇ ಇರಬಹುದು. ಆದರೆ ವಿಷಯ ಅದು ಮಾತ್ರವಲ್ಲ. ಎಲ್ಲರೂ ಧ್ವನಿಯೆತ್ತುತ್ತಿರುವುದು ಮಾನವ ಹಕ್ಕುಗಳ ಮೇಲೆ ನಡೆಯುತ್ತಿರುವ ದಾಳಿ, ಇಂಟರ್ನೆಟ್‌ ಸ್ಥಗಿತ, ಹಲವು ಪಿತೂರಿಗಳು, ಅಧಿಕಾರದ ದುರ್ಬಳಕೆ ಮತ್ತು ಪ್ರಚೋದನಕಾರಿ ಹೇಳಿಕೆಗಳ ಕುರಿತಾಗಿದೆ. ಮಾಧ್ಯಮಗಳು ನಿಮಗೆ ಅವರನ್ನು ʼಹೊರಗಿನವರು ಪಿತೂರಿ ನಡೆಸಲು ಬಂದಿದ್ದಾರೆʼ ಎಂದು ಹೇಳಬಹುದು. ಆದರೆ ಅವರು ಅನ್ಯಗ್ರಹ ಜೀವಿಗಳಲ್ಲ, ನಮ್ಮಂತೆ ಮನುಷ್ಯರೇ ಮತ್ತು ಅವರು ಮಾನವ ಹಕ್ಕುಗಳಿಗಾಗಿ ಮಾತನಾಡುತ್ತಿದ್ದಾರೆ ಎಂದು ನಾವು ತಿಳಿದುಕೊಳ್ಳಬೇಕಾಗಿದೆ".

"ಪತ್ರಕರ್ತರು ಕಿರುಕುಳಕ್ಕೊಳಗಾಗುತ್ತಿದ್ದಾರೆ. ಇಂಟರ್ನೆಟ್‌ ಅನ್ನು ತಡೆ ಹಿಡಿಯಲಾಗುತ್ತಿದೆ. ಮಾಧ್ಯಮಗಳ ಮತ್ತು ಸರಕಾರದ ಪಿತೂರಿಯಿಂದ ರೈತರನ್ನು ದೌರ್ಜನ್ಯಕ್ಕೊಳಪಡಿಸಲಾಗುತ್ತದೆ. ʼದೇಶ್‌ ಕಿ ಗದ್ದಾರೋಂ ಮೇ ಗೋಲಿ ಮಾರೋʼ ಎಂಬಂತಹ ಪ್ರಚೋದನಕಾರಿ ಮತ್ತು ದ್ವೇಷಪೂರಿತ ಮಾತುಗಳನ್ನು ಹೇಳಲಾಗುತ್ತದೆ. ಈ ಎಲ್ಲಾ ವಿಷಯಗಳೇ ವಿಶ್ವದಾದ್ಯಂತ ಸುದ್ದಿಯಾಗಿದ್ದು"

"ಇವರು ಹೊರಗಿನಿಂದ ಬಂದವರು, ಇವರ ಮಾತುಗಳನ್ನು ಕೇಳಬೇಡಿ ಎಂದು ಪ್ರಕರಣಕ್ಕೆ ಬಣ್ಣ ಹಚ್ಚಲು ಹಲವರು ಬರಬಹುದು. ಆದರೆ, ಯಾವುದೇ ಕಾರಣಕ್ಕೂ ಆ ಮಾತುಗಳಿಗೆ ಬಲಿಬೀಳಬೇಡಿ. ಇದು ಮನುಷ್ಯರ ವಿಚಾರ, ಮನುಷ್ಯರಿಗಾಗಿ ಎದ್ದೇಳಿ" ಎಂದು ಸೋನಾಕ್ಷಿ ಪೋಸ್ಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News