×
Ad

ರೈತರ ವೈದ್ಯಕೀಯ ನೆರವಿಗೆ 10,000 ಡಾಲರ್ ದೇಣಿಗೆ ನೀಡಿದ ಅಮೆರಿಕದ ಫುಟ್ಬಾಲ್ ಆಟಗಾರ

Update: 2021-02-04 22:29 IST

ವಾಷಿಂಗ್ಟನ್, ಫೆ. 4: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗೆ ಅಮೆರಿಕದ ನ್ಯಾಷನಲ್ ಫುಟಬಾಲ್ ಲೀಗ್‌ನ ಆಟಗಾರ ಜುಜು ಸ್ಮಿತ್-ಶುಸ್ಟರ್ ಅವರು 10 ಸಾವಿರ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘‘ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗೆ 10 ಸಾವಿರ ಡಾಲರ್ ದೇಣಿಗೆ ನೀಡಿದ್ದೇನೆ. ಈ ವಿಷಯ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಇಂತಹ ಸಮಯದಲ್ಲಿ ಜೀವಗಳನ್ನು ಉಳಿಸಬೇಕಿದೆ. ಹೆಚ್ಚಿನ ಜೀವಗಳನ್ನು ಕಳೆದುಕೊಳ್ಳದಂತೆ ನಾವು ತಡೆಯಬಹುದು ಎಂಬುದಾಗಿ ನಾನು ಭಾವಿಸುತ್ತೇನೆ’’ ಎಂದಿದ್ದಾರೆ.

ಜುಜು ಸ್ಮಿತ್-ಶುಸ್ಕರ್ ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್‌ನ ಆಟಗಾರರಾಗಿದ್ದು, ಪಿಟ್ಸ್‌ಬರ್ಗ್ ಸ್ಟೀಲರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.

ಅಮೆರಿಕ ಬಾಸ್ಕೆಟ್ ಬಾಲ್ ಆಟಗಾರ ಕೈಲ್ ಕುಜ್ಮಾ ಕೂಡ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೈಲ್ ಕುಜ್ಮಾ ಅವರು ಅಮೆರಿಕದ ಬಾಸ್ಕೆಟ್ ಬಾಲ್ ಅಸೋಸಿಯೇಷನ್ (ಎನ್‌ಬಿಎ)ನ ಆಟಗಾರರಾಗಿದ್ದು, ಲಾಸ್ ಏಂಜಲೀಸ್ ಲೇಕರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News