ಒಡಿಶಾದ ಬಾಲಸೂರಿನಲ್ಲಿ ದೇಶದ ಮೊದಲ ಗುಡುಗು-ಬಿರುಗಾಳಿ ಸಂಶೋಧನಾ ಕೇಂದ್ರ
ಹೊಸದಿಲ್ಲಿ, ಫೆ. 5: ದೇಶದ ಮೊದಲು ಗುಡುಗು-ಬಿರುಗಾಳಿ ಸಂಶೋಧನಾ ಕೇಂದ್ರ ಒಡಿಶಾದ ಬಾಲಸೂರಿನಲ್ಲಿ ಆಂಭವಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ. ಮಿಂಚಿನ ಆಘಾತಕ್ಕೆ ಮಾನವರ ಸಾವು ಹಾಗೂ ಸೊತ್ತು ಹಾನಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಗುಡುಗು-ಬಿರುಗಾಳಿ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ ಎಂದು ಅದು ತಿಳಿಸಿದೆ.
ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಡಾ. ಮೃತ್ಯುಂಜಯ ಮೋಹಪಾತ್ರ, ಇದೇ ರೀತಿಯ ಮೊದಲನೆಯ ಮುಂಗಾರು ಸಂಶೋಧನಾ ಕೇಂದ್ರವನ್ನು ಭೋಪಾಲದ ಸಮೀಪ ಸ್ಥಾಪಿಸುವುದಾಗಿ ತಿಳಿಸಿದರು. ಎರಡೂ ಯೋಜನೆಗಳು ಯೋಜನಾ ಹಂತದಲ್ಲಿದೆ. ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಭೂ ವಿಜ್ಞಾನಗಳ ಸಚಿವಾಲಯ, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಗಳ ಸಹಯೋಗದಿಂದ ಗುಡುಗು-ಬಿರುಗಾಳಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ‘‘ಐಎಂಡಿ, ಇಸ್ರೊ ಹಾಗೂ ಡಿಆರ್‌ಡಿಒ ಈಗಾಗಲೇ ಬಾಲಸೂರಿನಲ್ಲಿ ತನ್ನ ಘಟಕವನ್ನು ಹೊಂದಿದೆ. ಇದರ ಸಮೀಪದಲ್ಲೇ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು. ಇಲ್ಲಿ ಗುಡುಗು-ಬಿರುಗಾಳಿಯ ಕುರಿತು ಸಂಶೋಧನೆ ನಡೆಸಲಾಗುವುದು’’ ಎಂದು ಅವರು ಹೇಳಿದರು.
ಒಡಿಶಾದಲ್ಲಿ 2019ರಿಂದ 2020ರ ವರೆಗೆ ಮಿಂಚಿನ ಆಘಾತಕ್ಕೆ 3,218 ಜನರು ಜೀವ ಕಳೆದುಕೊಂಡಿದ್ದಾರೆ. ಮಿಂಚಿನ ಆಘಾತಕ್ಕೆ 2016ರಿಂದ 2017ರ ವರೆಗೆ 400, 2017ರಿಂದ 2018ರ ವರೆಗೆ 470 ಹಾಗೂ 2018ರಿಂದ 2019ರ ವರೆಗೆ 334 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.