×
Ad

ಕೆಲವು ಷರತ್ತುಗಳೊಂದಿಗೆ ನಾಗರಿಕ ಸೇವಾಕಾಂಕ್ಷಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಸಿದ್ಧ

Update: 2021-02-05 23:31 IST

ಹೊಸದಿಲ್ಲಿ,ಫೆ.5: ಕೋವಿಡ್-19 ಸಾಂಕ್ರಾಮಿಕದ ನಡುವೆ 2020ರಲ್ಲಿ ತಮ್ಮ ವಯೋಮಿತಿಗೆ ಅನುಗುಣವಾಗಿ ಕೊನೆಯ ಬಾರಿಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆದಿದ್ದ ನಾಗರಿಕ ಸೇವಾಕಾಂಕ್ಷಿ ಅಭ್ಯರ್ಥಿಗಳಿಗೆ ಒಂದು ಬಾರಿಯ ಸಡಿಲಿಕೆಯಾಗಿ ಹೆಚ್ಚುವರಿ ಅವಕಾಶವೊಂದನ್ನು ನೀಡಲು ತಾನು ಒಪ್ಪಿಕೊಂಡಿರುವುದಾಗಿ ಕೇಂದ್ರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಹಾಜರಾಗಲು ಒಂದು ಹೆಚ್ಚುವರಿ ಅವಕಾಶವನ್ನು ಒದಗಿಸುವ ಸಡಿಲಿಕೆಯು ನಿರ್ದಿಷ್ಟವಾಗಿ 2021ರ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸೀಮಿತವಾಗಿದ್ದು, 2020ರಲ್ಲಿ ತಮ್ಮ ಕೊನೆಯ ಪ್ರಯತ್ನವನ್ನು ಮಾಡಿದ್ದ ಮತ್ತು 2021ರ ಪರೀಕ್ಷೆಗಳಿಗೆ ತಮ್ಮ ವಯೋಮಿತಿಯನ್ನು ಮೀರಿರುವ ಅಭ್ಯರ್ಥಿಗಳಿಗೆ ಮಾತ್ರ ಈ ಸಡಿಲಿಕೆಯನ್ನು ನೀಡಬಹುದಾಗಿದೆ ಎಂದು ಕೇಂದ್ರವು ನ್ಯಾ.ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠಕ್ಕೆ ತಿಳಿಸಿತು.

ಯಾವುದೇ ಕಾರಣಕ್ಕೂ,ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗುವ ತಮ್ಮ ಅವಕಾಶಗಳನ್ನು ಉಳಿಸಿಕೊಂಡಿರುವ ಅಥವಾ ಪರೀಕ್ಷೆಗೆ ಹಾಜರಾಗಲು ವಿವಿಧ ವರ್ಗಗಳಿಗೆ ನಿಗದಿಗೊಳಿಸಿರುವ ವಯೋಮಿತಿಯನ್ನು ಮೀರಿದವರಿಗೆ ಈ ಸಡಿಲಿಕೆಯು ಅನ್ವಯವಾಗುವುದಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿತು.

 ಈ ಸಡಿಲಿಕೆಯನ್ನು ಪೂರ್ವ ನಿದರ್ಶನವಾಗಿ ಪರಿಗಣಿಸುವಂತಿಲ್ಲ ಮತ್ತು ಈ ಸಡಿಲಿಕೆಯು ಭವಿಷ್ಯದಲ್ಲಿ ಸಮಾನತೆಯ ಆಧಾರದಲ್ಲಿ ಯಾವುದೇ ವರ್ಗದ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗುವ ಹಕ್ಕುಗಳನ್ನು ನೀಡುವುದಿಲ್ಲ ಎಂದೂ ಅದು ನ್ಯಾಯಾಲಯಕ್ಕೆ ತಿಳಿಸಿತು.

ಸರಕಾರದ ಹೇಳಿಕೆಗೆ ಉತ್ತರಿಸುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.8ಕ್ಕೆ ನಿಗದಿಗೊಳಿಸಿತು.

ಕೋವಿಡ್ ಸಾಂಕ್ರಾಮಿಕದಿಂದಾಗಿ ತಮ್ಮ ಕೊನೆಯ ಪ್ರಯತ್ನದಲ್ಲಿ 2020ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗದಿದ್ದವರಿಗೆ ಅಥವಾ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗದಿದ್ದವರಿಗೆ ಹೆಚ್ಚುವರಿ ಅವಕಾಶವೊಂದನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರವು ಫೆ.1ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News