ಮ್ಯಾನ್ಮಾರ್ ಸೇನಾಡಳಿತದ ವಿರುದ್ಧ ಯಾಂಗೊನ್‌ನಲ್ಲಿ ಬೃಹತ್ ರ‍್ಯಾಲಿ

Update: 2021-02-07 15:56 GMT

 ಯಾಂಗೊನ್,ಫೆ.7: ಮ್ಯಾನ್ಮಾರ್‌ನಲ್ಲಿ ಸೇನಾಕ್ರಾಂತಿಯನ್ನು ವಿರೋಧಿಸಿ ಆ ದೇಶದ ಬೃಹತ್ ನಗರವಾದ ಯಾಂಗೊನ್‌ನಲ್ಲಿ ರವಿವಾರ ಸಾವಿರಾರು ಜನರು ಬೃಹತ್ ರ್ಯಾಲಿ ನಡೆಸಿದರು ಹಾಗೂ ಪದಚ್ಯುತ ಸರಕಾರದ ವರಿಷ್ಠೆ ಆಂಗ್ ಸಾನ್ ಸೂ ಕಿ ಅವರ ಬಿಡುಗಡೆಗೆ ಆಗ್ರಹಿಸಿದರು.

  ಯಾಂಗೂನ್ ವಿಶ್ವವಿದ್ಯಾನಿಲಯದ ಬಳಿ ನಡೆದ ಈ ರ್ಯಾಲಿಯಲ್ಲಿ 2 ಸಾವಿರಕ್ಕೂ ಅಧಿಕ ಕಾರ್ಮಿಕ ಹಾಗೂ ವಿದ್ಯಾರ್ಥಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಕಾರರು ‘‘ತಾಯಿ ಸೂ ಚಿರಾಯುವಾಗಲಿ’’ ಹಾಗೂ ‘‘ಮಿಲಿಟರಿ ಸರ್ವಾಧಿಕಾರಕ್ಕೆ ಧಿಕ್ಕಾರ’’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ವಾಹನದಟ್ಟಣೆಯ ನಡುವೆಯೂ ಮುಖ್ಯರಸ್ತೆಯಲ್ಲಿ ಪ್ರತಿಭಟನಕಾರರು ಪಾದಯಾತ್ರೆ ನಡೆಸಿದರು. ರಸ್ತೆಗಳಲ್ಲಿ ಸಾಗುತ್ತಿದ್ದ ವಾಹನ ಚಾಲಕರು ಹಾರ್ನ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

 ಪ್ರತಿಭಟನಕಾರರು ಗೃಹಬಂಧನದಲ್ಲಿರುವ ಸೂ ಕಿ ಹಾಗೂ ಅಧ್ಯಕ್ಷ ವಿನ್ ಮಿಯಿಂಟ್ ಅವರ ಬಿಡುಗಡೆಗೆ ಆಗ್ರಹಿಸುವ ಘೋಷಣೆಗಳನ್ನೊಳಗೊಂಡ ಭಿತ್ತಿಪತ್ರಗಳನ್ನು ಹಿಡಿದಿದ್ದರು.

ಶನಿವಾರ ಮ್ಯಾನ್ಮಾರ್‌ನ ನೂತನ ಸೇನಾಡಳಿತವು ದೇಶಾದ್ಯಂತ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿತ್ತಾದರೂ, ಇಂದು ಕೆಲವೆಡೆ ಅದನ್ನು ಮರುಸ್ಥಾಪಿಸಿರುವುದಾಗಿ ತಿಳಿದುಬಂದಿದೆ. ರಾಜಕೀಯ ಅಧಿಕಾರವನ್ನು ತೊರೆಯುವಂತೆ ಹಾಗೂ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವನ್ನು ಮರುಸ್ಥಾಪಿಸುವಂತೆ ಮತ್ತು ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮ್ಯಾನ್ಮಾರ್‌ನ ಸೇನಾಡಳಿತಕ್ಕೆ ಅಮೆರಿಕದ ರಾಯಭಾರಿ ಕಚೇರಿಯು ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News