ಟಿಬೆಟ್‌ನಲ್ಲಿ ಸೇನಾ ಮೂಲಸೌಕರ್ಯ ವೃದ್ಧಿಸುತ್ತಿರುವ ಚೀನಾ

Update: 2021-02-08 16:58 GMT

 ಬೀಜಿಂಗ್ (ಚೀನಾ), ಫೆ. 8: ಚೀನಾವು ಟಿಬೆಟ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸೇನಾ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ತ್ವರಿತಗತಿಯಿಂದ ನಿರ್ಮಿಸುತ್ತಿದೆ. ಇದು ಲಡಾಖ್ ವಲಯದಲ್ಲಿ ಭಾರತದೊಂದಿಗಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ಸೇನೆಯ ಸನ್ನದ್ಧತೆಯನ್ನು ಹೆಚ್ಚಿಸಿದೆ.

2017-20ರ ಅವಧಿಯಲ್ಲಿ ಚೀನಾವು ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪ ವಾಯುನೆಲೆಗಳು, ವಾಯು ರಕ್ಷಣಾ ನೆಲೆಗಳು ಮತ್ತು ಹೆಲಿಕಾಪ್ಟರ್ ನಿಲ್ದಾಣಗಳ ಸಂಖ್ಯೆಯನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಹೆಚ್ಚಿಸಿದೆ ಎಂಬುದಾಗಿ ಭದ್ರತಾ ಮತ್ತು ಗುಪ್ತಚರ ಸಲಹಾ ಸಂಸ್ಥೆ ‘ಸ್ಟ್ರಾಟ್‌ಫರ್’ ಹೇಳಿತ್ತು.

ಅದನ್ನೂ ಮೀರಿ ಈಗ ಹೊಸದಾಗಿ ಮೂಲಸೌಕರ್ಯಗಳ ನಿರ್ಮಾಣ ಈ ವಲಯದಲ್ಲಿ ನಡೆಯುತ್ತಿದೆ.

ಲಡಾಖ್ ಹೊರತುಪಡಿಸಿ, ಭೂತಾನ್ ಮತ್ತು ಅರುಣಾಚಲಪ್ರದೇಶಗಳ ವಿವಾದಿತ ಗಡಿಯುದ್ದಕ್ಕೂ ಇರುವ ವಲಯಗಳಲ್ಲಿ ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯನ್ನು ನಿಯೋಜಿಸಲಾಗುತ್ತಿದೆ ಹಾಗೂ ಈ ಪ್ರದೇಶಗಳಲ್ಲಿ ನಾಗರಿಕ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎನ್ನುವುದಕ್ಕೆ ಪುರಾವೆಗಳಿವೆ. ಈ ಪ್ರದೇಶಗಳ ವಿವಾದಿತ ಸ್ಥಳಗಳಲ್ಲಿ ಚೀನಾವು ಗ್ರಾಮಗಳನ್ನು ನಿರ್ಮಿಸಿ ಸಾವಿರಾರು ಜನರಿಗೆ ಅಲ್ಲಿ ವಾಸ್ತವ್ಯ ಏರ್ಪಡಿಸಿದೆ.

ಅದೂ ಅಲ್ಲದೆ, ಸೈನಿಕರು ಮತ್ತು ಸಲಕರಣೆಗಳನ್ನು ಗಡಿಗೆ ಸಾಗಿಸಲು ತಗಲುವ ಸಮಯವನ್ನು ಕಡಿತಗೊಳಿಸುವುದಕ್ಕಾಗಿ ಟಿಬೆಟ್‌ನಲ್ಲಿರುವ ಪ್ರಮುಖ ನಗರಗಳು ಮಗತ್ತು ಸೇನಾ ಕೇಂದ್ರಗಳ ನಡುವಿನ ಸಂಪರ್ಕವನ್ನೂ ಚೀನಾ ವೃದ್ಧಿಸಿದೆ ಎನ್ನುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News