ಅಪಹೃತಗೊಂಡು ಏಳು ಬಾರಿ ಮಾರಾಟಗೊಂಡಿದ್ದ ಛತ್ತೀಸ್‌ಗಡದ ಯುವತಿಯ ಆತ್ಮಹತ್ಯೆ:ಪೊಲೀಸರು

Update: 2021-02-09 14:38 GMT

ಹೊಸದಿಲ್ಲಿ,ಫೆ.9: ಕಳೆದ ವರ್ಷ ಅಪಹೃತಗೊಂಡು ಏಳು ತಿಂಗಳ ಅವಧಿಯಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಏಳು ಬಾರಿ ಮಾರಾಟವಾಗಿದ್ದ ಛತ್ತೀಸ್‌ಗಡದ 18ರ ಹರೆಯದ ಯುವತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್‌ಗಡ,ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಪೊಲೀಸರು ತನಿಖೆಗಳನ್ನು ನಡೆಸುತ್ತಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಬಬ್ಲೂ ಕುಷ್ವಾಹ್ ಎಂಬಾತ ತಲೆಮರೆಸಿಕೊಂಡಿದ್ದು,ಆತನನ್ನು ಇನ್ನೂ ಪತ್ತೆ ಹಚ್ಚಬೇಕಿದೆ. ಮಾನಸಿಕ ಅಸ್ವಸ್ಥನಾಗಿರುವ ಕುಷ್ವಾಹ್ ಜೊತೆ ಯುವತಿಯನ್ನು ಬಲವಂತದಿಂದ ಮದುವೆ ಮಾಡಲಾಗಿತ್ತು ಎಂದೂ ಪೊಲೀಸರು ತಿಳಿಸಿದರು.

ಛತ್ತೀಸ್‌ಗಡದ ಜಾಶಪುರ ನಿವಾಸಿಯಾಗಿದ್ದ ಯುವತಿ ತನ್ನ ತಂದೆಗೆ ಕೃಷಿ ಕೆಲಸಗಳಲ್ಲಿ ನೆರವಾಗುತ್ತಿದ್ದಳು. ದೂರದ ಸಂಬಂಧಿಯೋರ್ವ ಕೆಲಸ ಕೊಡಿಸಲು ಆಕೆಯನ್ನು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಗೆ ಕರೆತಂದಿದ್ದ ಮತ್ತು ಅಲ್ಲಿಂದ ಆಕೆಯನ್ನು ಅಪಹರಿಸಲಾಗಿತ್ತು.

ಯವತಿಯ ಅಪಹರಣಕಾರರು ಆಕೆಯ ಹೆತ್ತವರಿಗೆ ದೂರವಾಣಿ ಕರೆಯನ್ನು ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಬಳಿಕ ಈ ಘಟನೆಯು ಬೆಳಕಿಗೆ ಬಂದಿತ್ತು. ಹಣವನ್ನು ನೀಡದಿದ್ದರೆ ಯುವತಿಯನ್ನು ಕೊಲ್ಲುವುದಾಗಿ ಅಪಹರಣಕಾರರು ಆಕೆಯ ಹೆತ್ತವರಿಗೆ ಬೆದರಿಕೆಯನ್ನೊಡ್ಡಿದ್ದರು. ಯುವತಿಯ ಕುಟುಂಬವು ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಇಬ್ಬರು ಬಂಧಿತ ವ್ಯಕ್ತಿಗಳಾದ ಪಂಚಮ ಸಿಂಗ್ ರಾಯ್ ಮತ್ತು ಆತನ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಉದ್ಯೋಗದ ನೆಪದಲ್ಲಿ ತಾವು ಆಕೆಯನ್ನು ಜಾಶಪುರದಿಂದ ಛತ್ತರ್‌ಪುರಕ್ಕೆ ಕರೆತಂದಿದ್ದಾಗಿ ಒಪ್ಪಿಕೊಂಡಿದ್ದರು.

ರಾಯ್ ಮತ್ತು ಆತನ ಪತ್ನಿ ಏಳು ತಿಂಗಳ ಹಿಂದೆ ಯುವತಿಯನ್ನು ಛತ್ತರ್‌ಪುರದ ಸ್ಥಳೀಯ ವ್ಯಕ್ತಿಯೋರ್ವನಿಗೆ 20,000 ರೂ.ಗಳಿಗೆ ಮಾರಾಟ ಮಾಡಿದ್ದರು. ಉತ್ತರ ಪ್ರದೇಶದ ಲಲಿತಪುರದ ನಿವಾಸಿ ಸಂತೋಷ ಕುಷ್ವಾಹ್ ಎಂಬಾತ ಯುವತಿಯನ್ನು ಕೊನೆಯ ಬಾರಿ ಖರೀದಿಸಿದ್ದ ವ್ಯಕ್ತಿಯಾಗಿದ್ದು,ಇದಕ್ಕಾಗಿ ಆತ 70,000 ರೂ.ಗಳನ್ನು ಪಾವತಿಸಿದ್ದ. ಬಳಿಕ ಆಕೆಯನ್ನು ಬಬ್ಲೂ ಕುಷ್ವಾಹ್‌ನೊಂದಿಗೆ ಬಲವಂತದಿಂದ ಮದುವೆ ಮಾಡಿಸಲಾಗಿತ್ತು. ಯುವತಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಲಲಿತಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ ಶರ್ಮಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಛತ್ತರ್‌ಪುರ ಪೊಲೀಸರೀಗ ಇತರ ರಾಜ್ಯಗಳ ಆರೋಪಿಗಳು ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದ ಬುಡಕಟ್ಟು ಪ್ರದೇಶಗಳಿಂದ ಇನ್ನಷ್ಟು ಹೆಣ್ಣುಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುತ್ತಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News