ರಾಜಕೀಯಕ್ಕೆ ಮರಳುವೆ: ಶಶಿಕಲಾ ಪ್ರಕಟಣೆ

Update: 2021-02-09 15:38 GMT

ಚೆನ್ನೈ,ಫೆ.9: ಭ್ರಷ್ಟಾಚಾರದ ಆರೋಪದಲ್ಲಿ ನಾಲ್ಕು ವರ್ಷಗಳ ಜೈಲುವಾಸ ಪೂರೈಸಿ ಸೋಮವಾರ ಅಬ್ಬರದ ಸ್ವಾಗತದ ನಡುವೆ ತಮಿಳುನಾಡಿಗೆ ಮರಳಿದ ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ತಾನು ರಾಜಕೀಯಕ್ಕೆ ಮರಳುವುದಾಗಿ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಶಿಕಲಾ ಉಭಯ ಬಣಗಳ ಸಮಾನ ಶತ್ರುವಾಗಿರುವ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ವಿರುದ್ಧ ಒಂದಾಗುವಂತೆ ಎಐಎಡಿಎಂಕೆಯನ್ನು ಆಗ್ರಹಿಸಿದರು.

ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮತ್ತು ಡಿಎಂಕೆ ಅಧಿಕಾರದ ಗದ್ದುಗೆಯನ್ನೇರಲು ಅವಕಾಶ ನೀಡಬಾರದು. ಎಐಎಡಿಎಂಕೆ ಹಿಂದೆಯೂ ಹಲವಾರು ಕಷ್ಟಗಳನ್ನು ಎದುರಿಸಿದೆ ಮತ್ತು ಫೀನಿಕ್ಸ್‌ನಂತೆ ಮತ್ತೆ ಎದ್ದು ಬಂದಿದೆ ಎಂದ ಅವರು,ಎಐಎಡಿಎಂಕೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲಬೇಕು ಮತ್ತು ತನ್ನ ವಿಜಯವನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರಿಗೆ ಅರ್ಪಿಸಬೇಕು ಎಂದು ಹೇಳಿದರು. ನಮ್ಮ ಪಕ್ಷವು ಬಡವರ ಹೃದಯಗಳಲ್ಲಿ ಖಾಯಂ ಸ್ಥಾನವನ್ನು ಪಡೆಯಲಿದೆ ಎಂದರು.

ಪಕ್ಷದ ಧ್ವಜವನ್ನು ತಾನು ಬಳಸುವುದನ್ನು ತಡೆದಿದ್ದಕ್ಕಾಗಿ ಹಾಲಿ ಎಐಎಡಿಎಂಕೆ ನಾಯಕತ್ವದ ವಿರುದ್ಧ ದಾಳಿ ನಡೆಸಿದ ಅವರು, ಇದು ಪಕ್ಷದ ನಾಯಕರಲ್ಲಿಯ ಭೀತಿಯನ್ನು ಬಹಿರಂಗಗೊಳಿಸಿದೆ ಎಂದರು.

ಶಶಿಕಲಾ ಜೈಲಿನಿಂದ ಬಿಡುಗಡೆಗೊಳ್ಳುವ ಮುನ್ನ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಎಐಎಡಿಎಂಕೆಯಲ್ಲಿ ಅವರ ಮರುಸೇರ್ಪಡೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಆದರೆ ಮತಗಳ ವಿಭಜನೆಯಿಂದ ಡಿಎಂಕೆ ಲಾಭ ಪಡೆಯುವುದನ್ನು ತಪ್ಪಿಸಲು ಶಶಿಕಲಾರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವಂತೆ ಮಿತ್ರಪಕ್ಷ ಬಿಜೆಪಿ ಎಐಎಡಿಎಂಕೆಯನ್ನು ಒತ್ತಾಯಿಸುತ್ತಿದೆ ಎಂದು ಹೇಳಲಾಗಿದೆ. ಶಶಿಕಲಾರ ಸೋದರಳಿಯ ಟಿಟಿವಿ ದಿನಕರನ್ ಅವರು ಎಐಎಡಿಎಂಕೆಯಿಂದ ಹೊರಬಿದ್ದ ಬಳಿಕ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ ಎಂಬ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News