ಬಿಬಿಸಿ ಪ್ರಸಾರವನ್ನು ಸ್ಥಗಿತಗೊಳಿಸಿದ ಚೀನಾ

Update: 2021-02-12 17:07 GMT

ಬೀಜಿಂಗ್ (ಚೀನಾ), ಫೆ. 12: ಬಿಬಿಸಿ ವರ್ಲ್ಡ್ ನ್ಯೂಸ್ ಚಾನೆಲ್‌ನ ಪ್ರಸಾರವನ್ನು ಸ್ಥಗಿತಗೊಳಿಸಿರುವುದಾಗಿ ಚೀನಾದ ಪ್ರಸಾರ ನಿಯಂತ್ರಣ ಇಲಾಖೆ ಗುರುವಾರ ಘೋಷಿಸಿದೆ. ಈ ಚಾನೆಲ್ ಚೀನಾದಲ್ಲಿನ ವರದಿಗಾರಿಕೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ‘ಗಂಭೀರವಾಗಿ’ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಅದು ಹೇಳಿದೆ.

ಚೀನಾಕ್ಕೆ ಸಂಬಂಧಿಸಿದ ಬಿಬಿಸಿ ವರ್ಲ್ಡ್ ನ್ಯೂಸ್‌ನ ವರದಿಗಳು ಪ್ರಸಾರ ಮಾರ್ಗದರ್ಶಿ ಸೂತ್ರಗಳನ್ನು ‘ಗಂಭೀರವಾಗಿ ಉಲ್ಲಂಘಿಸಿರುವುದು’ ಕಂಡು ಬಂದಿದೆ ಎಂದು ಚೀನಾದ ನ್ಯಾಶನಲ್ ರೇಡಿಯೊ ಆ್ಯಂಡ್ ಟೆಲಿವಿಶನ್ ಅಡ್ಮಿನಿಸ್ಟ್ರೇಶನ್ (ಎನ್‌ಆರ್‌ಟಿಎ) ಹೇಳಿದೆ. ‘‘ಸುದ್ದಿಗಳು ಸತ್ಯ ಮತ್ತು ನ್ಯಾಯೋಚಿತ ಆಗಿರಬೇಕು ಹಾಗೂ ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡಬಾರದು ಎಂಬ ಷರತ್ತುಗಳನ್ನು ಚಾನೆಲ್ ಉಲ್ಲಂಘಿಸಿದೆ’’ ಎಂದು ಹೇಳಿಕೆಯೊಂದರಲ್ಲಿ ಅದು ಹೇಳಿದೆ.

ಚೀನಾದ ಶಿಬಿರಗಳಲ್ಲಿ ಉಯಿಘರ್ ಮುಸ್ಲಿಮ್ ಮಹಿಳೆಯರ ವಿರುದ್ಧ ನಡೆಸಲಾಗುತ್ತಿದೆಯೆನ್ನಲಾದ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯಗಳ ಕುರಿತ ವಿವರವಾದ ವರದಿಯೊಂದು ಫೆಬ್ರವರಿ 3ರಂದು ಬಿಬಿಸಿಯಲ್ಲಿ ಪ್ರಕಟಗೊಂಡ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಅದೂ ಅಲ್ಲದೆ, ಚೀನಾದ ಸರಕಾರಿ ಒಡೆತನದ ಸುದ್ದಿವಾಹಿನಿ ಸಿಜಿಟಿಎನ್‌ನ ಪ್ರಸಾರವನ್ನು ಕೆಲವು ದಿನಗಳ ಹಿಂದೆ ಬ್ರಿಟನ್‌ನಲ್ಲಿ ನಿಲ್ಲಿಸಲಾಗಿತ್ತು. ಸರಕಾರಿ ಒಡೆತನಕ್ಕೆ ಸಂಬಂಧಿಸಿದ ಬ್ರಿಟನ್‌ನ ಕಾನೂನನ್ನು ಚಾನೆಲ್ ಉಲ್ಲಂಘಿಸಿದೆ ಎಂದು ಬ್ರಿಟನ್‌ನ ಪ್ರಸಾರ ನಿಯಂತ್ರಣ ಇಲಾಖೆ ಹೇಳಿತ್ತು. ಅದಕ್ಕೆ ಪ್ರತೀಕಾರವಾಗಿ ಚೀನಾ ಈ ಕ್ರಮ ತೆಗೆದುಕೊಂಡಿದೆ ಎಂಬುದಾಗಿಯೂ ಹೇಳಲಾಗಿದೆ.

ಚೀನಾದಲ್ಲಿ ಪ್ರಸಾರವನ್ನು ಮುಂದುವರಿಸಲು ಬಿಬಿಸಿಗೆ ಎನ್‌ಆರ್‌ಟಿಎ ಅನುಮತಿ ನೀಡುವುದಿಲ್ಲ ಹಾಗೂ ಪರವಾನಿಗೆಯನ್ನು ಹೊಸ ವರ್ಷದಲ್ಲಿ ನವೀಕರಿಸಲು ಅದು ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಎನ್‌ಆರ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಬಿಸಿ ಮೇಲಿನ ನಿಷೇಧವು ಅಸ್ವೀಕಾರಾರ್ಹ ಎಂದು ಹೇಳಿರುವ ಬ್ರಿಟನ್ ವಿದೇಶ ಕಾರ್ಯದರ್ಶಿ ಡಾಮಿನಿಕ್ ರಾಬ್, ಅದು ಮಾಧ್ಯಮ ಸ್ವಾತಂತ್ರ್ಯವನ್ನು ಕಡಿತಗೊಳಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News