×
Ad

ವೃದ್ಧ ಪೋಷಕರನ್ನು ನಿರ್ಲಕ್ಷಿಸಿದ್ದಕ್ಕೆ ಜಿಲ್ಲಾ ಪರಿಷತ್‌ನ 7 ಉದ್ಯೋಗಿಗಳ ವೇತನ ಶೇ. 30 ಕಡಿತ

Update: 2021-02-13 22:58 IST

ಔರಂಗಾಬಾದ್, ಫೆ. 13: ವೃದ್ಧ ಪೋಷಕರನ್ನು ನಿರ್ಲಕ್ಷಿಸಿದ 7 ಉದ್ಯೋಗಿಗಳ ಶೇ. 30 ವೇತನವನ್ನು ಮಹಾರಾಷ್ಟ್ರದ ಲಾತೂರ್ ಜಿಲ್ಲಾ ಪರಿಷತ್ ಕಡಿತಗೊಳಿಸಿದೆ ಎಂದು ಅಧ್ಯಕ್ಷ ರಾಹುಲ್ ಬೊಂಡ್ರೆ ಶನಿವಾರ ತಿಳಿಸಿದ್ದಾರೆ.

ವಿಶೇಷವೆಂದರೆ ಪೋಷಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಕ್ಕೆ ಒಳಗಾದ 12 ಉದ್ಯೋಗಿಗಳಲ್ಲಿ 6 ಮಂದಿ ಅಧ್ಯಾಪಕರಾಗಿದ್ದಾರೆ.

ಕಡಿತಗೊಳಿಸಲಾದ ಮೊತ್ತವನ್ನು ಈ ಉದ್ಯೋಗಿಗಳ ಪೋಷಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಬೊಂಡ್ರೆ ತಿಳಿಸಿದ್ದಾರೆ.

ಪೋಷಕರನ್ನು ನಿರ್ಲಕ್ಷಿಸಿದ ಎಲ್ಲ ಉದ್ಯೋಗಿಗಳ ವೇತನದಲ್ಲಿ ಶೇ. 30 ಕಡಿತಗೊಳಿಸುವ ಪ್ರಸ್ತಾವವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಲಾತೂರ್ ಜಿಲ್ಲಾ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿತ್ತು.

ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು 12 ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈ 12ರಲ್ಲಿ ನಾವು 7 ಉದ್ಯೋಗಿಗಳ ವೇತನವನ್ನು ಡಿಸೆಂಬರ್‌ನಿಂದ ಕಡಿತಗೊಳಿಸಲು ಆರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ತಿಂಗಳು ಈ ವೇತನ ಕಡಿತ ಮುಂದುವರಿಯಲಿದೆ. ಇಂತಹ ಒಂದು ಪ್ರಕರಣದ ಸರಾಸರಿ ಕಡಿತ 15 ಸಾವಿರ ರೂಪಾಯಿ. ಕೆಲವು ಪ್ರಕರಣಗಳಲ್ಲಿ ನೋಟಿಸು ಕಳುಹಿಸಿದ ಬಳಿಕ ಉದ್ಯೋಗಿಗಳು ಹಾಗೂ ಅವರ ಪೋಷಕರು ನಡುವೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಾಗಿದೆ ಎಂದು ಬೊಂಡ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News