ಪ್ಯಾನ್ ಇಂಡಿಯಾ ಚಿತ್ರವೆಂದು ನಮ್ಮ ಸೊಗಡು ಮರೆಯಬಾರದು: ಜೀತು ಜೋಸೆಫ್

Update: 2021-02-13 19:30 GMT

ಮಲಯಾಳಂನ ‘ದೃಶ್ಯಂ’ ಸಿನೆಮಾ ಹಲವಾರು ಭಾಷೆಗಳಿಗೆ ರಿಮೇಕ್ ಆಗಿದೆ. ಕನ್ನಡದಲ್ಲಿಯೂ ‘ದೃಶ್ಯ’ ಹೆಸರಿನಲ್ಲಿ ರಿಮೇಕ್ ಆಗಿ ಯಶಸ್ಸಾಗಿತ್ತು. ಈ ವಾರ ಮಲಯಾಳಂ ‘ದೃಶ್ಯಂ’ ಸಿನೆಮಾದ ಎರಡನೇ ಭಾಗ ಅಮೆಝಾನ್ ಮೂಲಕ ಬಿಡುಗಡೆಯಾಗುತ್ತಿದೆ. ‘ದೃಶ್ಯಂ’ ಬಿಡುಗಡೆಯಾದಾಗ ಕೇರಳದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಸಿನೆಮಾ ಎನ್ನುವ ದಾಖಲೆ ಮೂಡಿಸಿತ್ತು. ಅಂತಹದ್ದೊಂದು ಸಿನೆಮಾದ ಎರಡನೇ ಭಾಗ ಎನ್ನುವ ಕಾರಣಕ್ಕೆ ಎಲ್ಲೆಡೆಯೂ ಚಿತ್ರದ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಹಾಗಾಗಿ ಎಲ್ಲ ಭಾಷೆಯ ಎಲ್ಲ ವರ್ಗದ ಜನರನ್ನು ತೃಪ್ತಿಪಡಿಸಬೇಕು ಎನ್ನುವ ಪ್ರಯತ್ನ ನಿರ್ದೇಶಕರಲ್ಲಿದೆ ಎಂದು ನೀವು ಅಂದುಕೊಂಡರೆ ಅದು ತಪ್ಪು! ಅವರದೇನಿದ್ದರೂ ಕತೆಗೆ ನ್ಯಾಯ ಸಲ್ಲಿಸುವ ದೃಶ್ಯಗಳ ಸಂಯೋಜನೆಯಂತೆ. ಇಂತಹದ್ದೊಂದು ಆಸಕ್ತಿಕರವಾದ ಉತ್ತರವನ್ನು ಸ್ವತಃ ನಿರ್ದೇಶಕ ಜೀತು ಜೋಸೆಫ್ ಅವರು ‘ವಾರ್ತಾಭಾರತಿ’ಗೆ ನೀಡಿದ್ದಾರೆ. ನಮ್ಮಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಎನ್ನುವ ಕಾರಣಕ್ಕಾಗಿ ಎಲ್ಲ ಭಾಷೆಗಳ ಮಂದಿಯನ್ನು ಗಮನದಲ್ಲಿರಿಸಿಕೊಂಡು ಚಿತ್ರ ಮಾಡುವವರು ಹೇಗೆ ಕನ್ನಡದ ಸೊಗಡನ್ನು ಮರೆಯಬಾರದು ಎನ್ನುವುದಕ್ಕೆ ಉತ್ತರ ನೀಡುವಂತಹ ಈ ಸಂದರ್ಶನದಲ್ಲಿ ಚಿತ್ರದ ಕುರಿತಾದ ಒಂದಷ್ಟು ವಿಶೇಷ ಮಾಹಿತಿಗಳಿವೆ.


ವಾ.ಭಾ.: ‘ದೃಶ್ಯಂ’ ಸಿನೆಮಾ ಎರಡನೇ ಭಾಗ ಮಾಡಬೇಕು ಅನಿಸಿದ್ದೇಕೆ?

ಜೀ.ಜೋ.: ನಿಜ ಹೇಳಬೇಕೆಂದರೆ ಅಂಥದೊಂದು ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಹಲವಾರು ಮಂದಿ ತಾವು ಅದರ ಎರಡನೇ ಭಾಗ ಮಾಡಲು ಕತೆ ಬರೆಯುವುದಾಗಿ ಹೇಳುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ನನ್ನಲ್ಲಿಯೂ ಅದಕ್ಕೊಂದು ಎರಡನೇ ಭಾಗದ ಕತೆ ಮೂಡುತ್ತಾ ಬಂತು. ಮಾತ್ರವಲ್ಲ, ಮುಚ್ಚಿರುವ ಚಿತ್ರಮಂದಿರಕ್ಕೆ ಮತ್ತೆ ಪ್ರೇಕ್ಷಕರನ್ನು ಆಕರ್ಷಿಸಲು ಒಂದು ಕುತೂಹಲಕಾರಿ ಯಶಸ್ವಿ ಚಿತ್ರದ ಎರಡನೇ ಭಾಗಕ್ಕೆ ಸಾಧ್ಯ ಎಂದು ಯೋಜನೆ ಹಾಕಿದ್ದೆ. ಆದರೆ ಸಿನೆಮಾ ಪೂರ್ತಿಯಾದರೂ ಚಿತ್ರಮಂದಿರಗಳು ತೆರೆದಿರದ ಕಾರಣ ಅನಿವಾರ್ಯವಾಗಿ ಒಟಿಟಿ ಮೂಲಕ ತೆರೆಗೆ ಬರುತ್ತಿದೆ.

ವಾ.ಭಾ.: ಎರಡನೇ ಭಾಗದಲ್ಲಿ ಆಕರ್ಷಕವೆನಿಸಬಹುದಾದ ಪ್ರಮುಖ ಅಂಶಗಳೇನು?
 ಜೀ.ಜೋ.: ಇದರಲ್ಲಿ ಕ್ರೈಮ್ ಇರುವುದಿಲ್ಲ. ಇದು ಸಂಪೂರ್ಣವಾಗಿ ಕುಟುಂಬಕ್ಕೆ ಸಂಬಂಧಿಸಿದ ಕತೆ. ಆದರೆ ‘ದೃಶ್ಯಂ’ನಲ್ಲಿ ನಡೆದ ಕೆಲವು ಘಟನೆಗಳು ಹೇಗೆ ಆರು ವರ್ಷಗಳ ಬಳಿಕ ಕೂಡ ಆ ಕುಟುಂಬವನ್ನು ಕಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ನಾಯಕನ ಪಾತ್ರ ಇಷ್ಟು ವರ್ಷಗಳಲ್ಲಿ ಶ್ರೀಮಂತಗೊಂಡಿರುತ್ತದೆ. ಕೇಬಲ್ ಟಿವಿ ಸರ್ವಿಸ್ ಮಾಡುತ್ತಿದ್ದ ಆತ ಇದೀಗ ಥಿಯೇಟರ್ ಮಾಲಕ ಆಗಿರುತ್ತಾನೆ. ಶ್ರೀಮಂತಿಕೆ ಆತನಲ್ಲಿನ ಆತ್ಮವಿಶ್ವಾಸ ಹೆಚ್ಚು ಮಾಡಿರುತ್ತದೆ. ಆದರೆ ಈ ಹಿಂದೆ ಆತನ ಬೆಂಬಲಕ್ಕೆ ನಿಂತಿದ್ದ ಊರಿನ ಜನತೆಗೆ ಆತನ ಶ್ರೀಮಂತಿಕೆ ಮತ್ತು ಓವರ್ ಕಾನ್ಫಿಡೆನ್ಸ್ ಇರುವ ಆತನ ಸ್ವಭಾವ ಇಷ್ಟವಾಗುವುದಿಲ್ಲ. ಮನೆಯಲ್ಲಿ ಪತ್ನಿ ಮತ್ತು ಮದುವೆಯ ವಯಸ್ಸಿಗೆ ಬಂದಿರುವ ಪುತ್ರಿಗೆ ಕೂಡ ಹಳೆಯ ಘಟನೆ ಕಾಡುವಂಥ ಸಂದರ್ಭ ಎದುರಾಗುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲಕ್ಕಾಗಿ ಚಿತ್ರ ನೋಡಬಹುದು.

ವಾ.ಭಾ.: ಈ ಎರಡನೇ ಭಾಗವನ್ನು ನೀವು ಕನ್ನಡದಲ್ಲಿ ನಿರ್ದೇಶಿಸುವ ಸಾಧ್ಯತೆ ಇದೆಯೇ?
ಜೀ.ಜೋ.: ನನಗೆ ಸಿನೆಮಾ ರಿಮೇಕ್ ಮಾಡುವುದು ಎಂದರೆ ಅಷ್ಟು ಆಸಕ್ತಿಕರ ವಿಚಾರವಲ್ಲ. ಆದರೂ ನಾನು ದೃಶ್ಯ ಸಿನೆಮಾವನ್ನು ತಮಿಳಲ್ಲಿಯೂ ನಿರ್ದೇಶಿಸಿದ್ದೆ. ಅಲ್ಲಿ ಕಮಲಹಾಸನ್ ನಾಯಕರಾಗಿದ್ದರು. ಹಾಗಾಗಿ ತಮಿಳು ಮತ್ತು ಹಿಂದಿ ರಿಮೇಕ್‌ಗಳನ್ನು ಮಾತ್ರ ನೋಡಿದ್ದೇನೆ. ಯಾಕೆಂದರೆ ಆ ಎರಡು ಭಾಷೆಗಳು ನನಗೆ ಅರ್ಥವಾಗುತ್ತವೆ. ಆದರೆ ಹಿಂದಿ ಚಿತ್ರದ ನಿರ್ದೇಶಕ ನಾನಲ್ಲ. ಕನ್ನಡದಲ್ಲಿಯೂ ‘ದೃಶ್ಯ’ ನಿರ್ದೇಶಿಸಿದ್ದು ನಾನಲ್ಲ. ಮಾತ್ರವಲ್ಲ, ಕನ್ನಡ, ತೆಲುಗು ಭಾಷೆಗಳು ಗೊತ್ತಿರದ ಕಾರಣ ಆ ರಿಮೇಕ್ ಸಿನೆಮಾಗಳನ್ನು ನಾನು ನೋಡಿಲ್ಲ. ಆದರೆ ಕನ್ನಡ ರಿಮೇಕ್‌ನಲ್ಲಿ ರವಿಚಂದ್ರನ್ ಅವರು ನಟಿಸಿದ್ದಾರೆ ಎನ್ನುವುದು ನನಗೆ ಗೊತ್ತು. ಮೊದಲು ‘ದೃಶ್ಯಂ 2’ ಮಲಯಾಳಂನಲ್ಲಿ ಬಿಡುಗಡೆಯಾಗಲಿ. ಬಳಿಕ ನನ್ನ ಮತ್ತೊಂದು ಪ್ರಾಜೆಕ್ಟ್ ಮೋಹನ್‌ಲಾಲ್ ಅವರ ಜೊತೆಗೆ ಮುಂದುವರಿದಿದೆ. ಅದು ಮುಗಿಯಬೇಕು. ಹಾಗೆ ಒಪ್ಪಿಕೊಂಡಿರುವ ಕೆಲಸಗಳು ಮುಗಿದ ಮೇಲೆ ಅವಕಾಶ ಮತ್ತು ಸಂದರ್ಭ ಎರಡೂ ಕೈಗೂಡಿ ಬಂದರೆ ಖಂಡಿತವಾಗಿಯೂ ಕನ್ನಡ ಸಿನೆಮಾ ಮಾಡುವುದು ನನಗೆ ಖುಷಿ ವಿಚಾರವೇ.

 ವಾ.ಭಾ.: ಇದೀಗ ನಿಮ್ಮ ಸಿನೆಮಾದತ್ತ ಎಲ್ಲ ಭಾಷೆಯವರ ಕಣ್ಣು ಬಿದ್ದಿದೆ. ಹಾಗಾಗಿ ಹಿಂದಿನ ಗ್ರಾಮೀಣ ಸೊಗಡು ಬಿಟ್ಟು, ಹೆಚ್ಚು ಮಂದಿಗೆ ತಲುಪಿಸುವಂಥ ದೃಶ್ಯದತ್ತ ಪ್ರಯತ್ನ ಮಾಡಿದ್ದೀರ?
  ಜೀ.ಜೋ.: ಖಂಡಿತವಾಗಿ ಇಲ್ಲ! ಯಾಕೆಂದರೆ ನಾನು ಹಾಗೆ ಮಾಡಿದರೆ ಅದು ನಾಯಕನ ಪಾತ್ರಕ್ಕೆ ಮಾಡುವ ಮೋಸವಾದೀತು. ದೃಶ್ಯದಲ್ಲಿ ಇದ್ದ ಗ್ರಾಮೀಣ ಸೊಗಡೇ ಎಲ್ಲ ಭಾಷೆಯ ಮಂದಿಗೂ ಇಷ್ಟವಾಗಿತ್ತು. ಉದಾಹರಣೆಗೆ ಚೀನಾದಂತಹ ವಿದೇಶದ ಮಂದಿ ಕೂಡ ನಮ್ಮಿಂದ ಚಿತ್ರದ ರೈಟ್ಸ್ ಪಡೆದು ರಿಮೇಕ್ ಮಾಡಿದ್ದರು. ನಾವು ಎಲ್ಲಿಯ ಕತೆ ಹೇಳುತ್ತೇವೆಯೋ ಅಲ್ಲಿನ ಸೊಗಡನ್ನು ನೈಜವಾಗಿಯೇ ತೆರೆದಿಟ್ಟರೆ ಮಾತ್ರ ಅದು ಕತೆಗೆ ಸಲ್ಲಿಸುವ ನ್ಯಾಯವಾಗುತ್ತದೆ. ಪ್ಯಾನ್ ಇಂಡಿಯಾ ಜನತೆ ನೋಡುತ್ತಾರೆ ಎನ್ನುವ ಕಾರಣಕ್ಕೆ ಇಂತಹ ಚಿತ್ರದಲ್ಲಿ ಅವರಿಗೆ ತಕ್ಕಂತೆ ಸಂದರ್ಭಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮೊದಲು ನಾವು ನಮ್ಮ ಕತೆಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಆ ಸಿನ್ಸಿಯಾರಿಟಿಯೇ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅದು ನಮ್ಮ ಸಿನೆಮಾದ ಮೂಲಕ ನಮ್ಮ ಆಚಾರ, ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇತರ ಭಾಷಿಕರನ್ನು ಕೂಡ ಪ್ರೇರೇಪಿಸುತ್ತದೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News