×
Ad

ಅಧಿಕಾರಿಗಳು ನನ್ನನ್ನು, ತಂದೆಯನ್ನು ಮತ್ತು ಕುಟುಂಬವನ್ನು ಗೃಹಬಂಧನದಲ್ಲಿಟ್ಟಿದ್ದಾರೆ: ಉಮರ್‌ ಅಬ್ದುಲ್ಲಾ ಆರೋಪ

Update: 2021-02-14 14:36 IST

ಶ್ರೀನಗರ: ನ್ಯಾಶನಲ್‌ ಕಾನ್ಫರೆನ್ಸ್‌ಪಕ್ಷದ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ತಮ್ಮ ತಂದೆ ಹಾಗೂ ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಸೇರಿದಂತೆ ತಮ್ಮ ಕುಟುಂಬವನ್ನು ಅಧಿಕಾರಿಗಳು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಹೇಳಿದ್ದಾರೆ.

ಆದರೆ, 2019 ರ ಪುಲ್ವಾಮಾ ದಾಳಿಗೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

“ಆಗಸ್ಟ್ 2019 ರ ನಂತರದ ಹೊಸ ಜಮ್ಮುಕಾಶ್ಮೀರ ಸೃಷ್ಟಿಯಾಗಿದೆ. ನಾವು ಯಾವುದೇ ವಿವರಣೆಗಳ ಅಗತ್ಯವಿಲ್ಲದೇ ನಮ್ಮ ಮನೆಗಳಲ್ಲಿ ಬಂಧಿಸಲ್ಪಡುತ್ತೇವೆ. ಅವರು ನನ್ನ ತಂದೆಯನ್ನು (ಸಂಸದ ಫಾರೂಕ್‌ ಅಬ್ದುಲ್ಲಾ) ಮತ್ತು ನನ್ನನ್ನು ನಮ್ಮ ಮನೆಯಲ್ಲಿ ಲಾಕ್ ಮಾಡಿರುವುದು ತುಂಬಾ ಕೆಟ್ಟ ನಿರ್ಧಾರವಾಗಿದೆ. ಅವರು ನನ್ನ ಸಹೋದರಿ ಮತ್ತು ಅವರ ಮಕ್ಕಳನ್ನು ಮನೆಯಲ್ಲಿ ಲಾಕ್ ಮಾಡಿದ್ದಾರೆ” ಎಂದು ಉಮರ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ, ನಗರದ ಗುಪ್ಕರ್ ಪ್ರದೇಶದಲ್ಲಿ ತಮ್ಮ ನಿವಾಸದ ದ್ವಾರಗಳ ಹೊರಗೆ ಪೊಲೀಸ್ ವಾಹನಗಳಿರುವ ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಮನೆಯ ಸಿಬ್ಬಂದಿಯನ್ನು ಒಳಗೆ ಬಿಡುತ್ತಿಲ್ಲ ಎಂದು ಉಮರ್‌ ಅಬ್ದುಲ್ಲಾ ಆರೋಪಿಸಿದ್ದಾರೆ.

‘‘ನಿಮ್ಮ ನೂತನ ಮಾದರಿಯ ಪ್ರಜಾಪ್ರಭುತ್ವದಂತೆ ಯಾವುದೇ ವಿವರಣೆ ನೀಡದೆ ನಮ್ಮ ನಿವಾಸದಲ್ಲಿ ನಮ್ಮನ್ನು ಕೂಡಿ ಹಾಕಲಾಗಿದೆ. ಕೆಲಸದ ಸಿಬ್ಬಂದಿಗೂ ನಿವಾಸ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಅನಂತರವೂ ನಾನು ಕೋಪ ಹಾಗೂ ಅಸಾಮಾಧಾನಗೊಂಡಿದ್ದೇನೆ ಎಂದರೆ ನಿಮಗೆ ಅಚ್ಚರಿಯಾಗುತ್ತದೆ’’ ಎಂದು ಉಮರ್ ಅಬ್ದುಲ್ಲಾ ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪರಿಂಪೋರಾ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಉಗ್ರರೆಂದು ಹೇಳಲಾದ ಮೂವರಲ್ಲಿ ಓರ್ವನಾದ ಅಥರ್ ಮುಸ್ತಾಖ್‌ನ ಕುಟುಂಬವನ್ನು ಭೇಟಿ ಮಾಡುವುದಕ್ಕೆ ಮುನ್ನ ತನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶನಿವಾರ ಪ್ರತಿಪಾದಿಸಿದ್ದರು.

‘‘ನಕಲಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಅಥರ್ ಮುಸ್ತಾಖ್ ಕುಟುಂಬವನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವಾಗ ಗೃಹಬಂಧನಕ್ಕೆ ಒಳಪಡಿಸುವುದು ಸಾಮಾನ್ಯ ವಿಷಯ. ಮೃತದೇಹ ನೀಡುವಂತೆ ಆಗ್ರಹಿಸಿದ ಅಥರ್ ಮುಸ್ತಾಖ್‌ನ ತಂದೆಯ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News