"ನಾನು ಪುನರಾವರ್ತಿಸುತ್ತಿದ್ದೇನೆ, ಕೇರಳದಲ್ಲಿ ಸಿಎಎ ಕಾಯ್ದೆ ಜಾರಿಯಾಗುವುದಿಲ್ಲ": ಪಿಣರಾಯಿ ವಿಜಯನ್‌ ಹೇಳಿಕೆ

Update: 2021-02-14 09:52 GMT

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

"ಕೊರೊನಾ ಲಸಿಕೆ ನೀಡಿಕೆ ಅಭಿಯಾನವು ಮುಕ್ತಾಯಗೊಂಡ ನಂತರ ನಾವು ಪೌರತ್ವ ನೀಡುವ ಸಿಎಎ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಗೃಹಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಆದರೆ ನಾವು ಕೇರಳದಲ್ಲಿ ಯಾವುದೇ ಕಾರಣಕ್ಕೂ ಈ ನಿಯಮವನ್ನು ಜಾರಿಗೆ ತರುವುದಿಲ್ಲ ಎಂದು ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

“ಸಿಎಎ ಜಾರಿಗೆ ಬರುವುದಿಲ್ಲ ಎಂದು ನಾವು ಹೇಳಿದರೆ, ಅದು ಕಾರ್ಯಗತವಾಗುವುದಿಲ್ಲ ಎಂದರ್ಥ ... ನಾನು ಅದನ್ನು ಪುನರಾವರ್ತಿಸುತ್ತಿದ್ದೇನೆ" ಎಂದು ಕೇರಳ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾಗಿ theindianexpress.com ವರದಿ ಮಾಡಿದೆ. ಈ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ರಾಜ್ಯವ್ಯಾಪಿ ಪ್ರವಾಸದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವಾಗ, ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಅಭಿಯಾನ ಪೂರ್ಣಗೊಂಡ ನಂತರ ಸಿಎಎ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಅಮಿತ್‌ ಶಾ ಹೇಳಿದ್ದ ಕೆಲ ದಿನಗಳ ನಂತರ ಪಿಣರಾಯಿ ವಿಜಯನ್ ಅವರ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವೆಂದರೆ, ಕೇರಳ ಅಸೆಂಬ್ಲಿ 2019 ರಲ್ಲಿ ಸಿಎಎ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿದ್ದು, ಈ ರೀತಿಯ ಕ್ರಮ ಕೈಗೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News