×
Ad

ಉತ್ತರಾಖಂಡ ದುರಂತ: ತಪೋವನ ಸುರಂಗದಲ್ಲಿ 12 ಶವಗಳು ಪತ್ತೆ,50ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ

Update: 2021-02-14 19:12 IST

ಚಮೋಲಿ,ಫೆ.14: ರಕ್ಷಣಾ ತಂಡಗಳು ರವಿವಾರ ಬೆಳಿಗ್ಗೆ ಎನ್‌ಟಿಪಿಸಿಯ ತಪೋವನ-ವಿಷ್ಣುಗಡ ವಿದ್ಯುತ್ ಯೋಜನೆಯ ಸುರಂಗದಿಂದ 12 ಶವಗಳನ್ನು ಹೊರತೆಗೆಯುವುದರೊಂದಿಗೆ ಫೆ.7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಅಲಕನಂದಾ ಮತ್ತು ಧೌಲಿಗಂಗಾ ನದಿಗಳಲ್ಲಿ ಉಂಟಾಗಿದ್ದ ಭಾರೀ ಮಹಾಪೂರದಿಂದಾಗಿ ಸಂಭವಿಸಿರುವ ಸಾವುಗಳ ಸಂಖ್ಯೆ 50ಕ್ಕೇರಿದೆ. ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದ್ದು,ಕೆಸರಿನಿಂದ ತುಂಬಿಹೋಗಿರುವ ತಪೋವನ ಸುರಂಗದಲ್ಲಿ ಇನ್ನೂ ಹಲವರು ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ರಕ್ಷಣಾ ತಂಡಗಳು ಸುರಂಗದಲ್ಲಿ ಸಿಕ್ಕಿಕೊಂಡವರನ್ನು ತಲುಪುವ ಪ್ರಯತ್ನವಾಗಿ ರವಿವಾರ ಬೆಳಿಗ್ಗೆ ಸುರಂಗದಲ್ಲಿ ಅಗಲವಾದ ಮತ್ತು ಆಳವಾದ ರಂಧ್ರಗಳನ್ನು ಕೊರೆಯುವ ಕಾರ್ಯವನ್ನು ಆರಂಭಿಸಿವೆ. ‘ಒಳಗಿದ್ದವರ ರಕ್ಷಣೆಗಾಗಿ ಮೂರು ಆಯಾಮಗಳ ಕಾರ್ಯತಂತ್ರದೊಡನೆ ನಾವು ಕೆಲಸ ಮಾಡುತ್ತಿದ್ದೇವೆ. ಒಳಗಿರುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕ್ಯಾಮೆರಾ ಮತ್ತು ಸುರಂಗದಲ್ಲಿ ಸೇರಿರುವ ನೀರನ್ನು ಹೊರತೆಗೆಯಲು ಪೈಪ್‌ನ್ನು ತೂರಿಸಲು ಈ ಹಿಂದೆ ಕೊರೆಯಲಾಗಿದ್ದ ರಂಧ್ರವನ್ನು ಒಂದು ಅಡಿಯಷ್ಟು ಅಗಲಗೊಳಿಸಲಾಗುತ್ತಿದೆ ಎಂದು ಎನ್‌ಟಿಪಿಸಿ ಯೋಜನೆಯ ಜನರಲ್ ಮ್ಯಾನೇಜರ್ ಆರ್.ಪಿ.ಅಹಿರ್ವಾರ್ ತಿಳಿಸಿದರು.

ಮಹಾಪೂರದಿಂದ ಪೀಡಿತ ಪ್ರದೇಶಗಳಲ್ಲಿ ಈವರೆಗೆ 50 ಶವಗಳು ಪತ್ತೆಯಾಗಿದ್ದು,160ಕ್ಕೂ ಅಧಿಕ ಜನರು ಇನ್ನೂ ನಾಪತ್ತೆಯಾಗಿದ್ದಾರೆ. ತಪೋವನ ಸುರಂಗದಲ್ಲಿ 20ಕ್ಕೂ ಅಧಿಕ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News