ತೈಲ ಬೆಲೆಯೇರಿಕೆ: ಮೇಜಿನ ಮೇಲೆ ಗ್ಯಾಸ್‌ ಸಿಲಿಂಡರ್‌ ಗಳನ್ನಿಟ್ಟು ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌

Update: 2021-02-15 13:10 GMT

ಹೊಸದಿಲ್ಲಿ: ಕೇಂದ್ರ ಸರಕಾರವು ರವಿವಾರ ಮಧ್ಯರಾತ್ರಿಯಿಂದ ಅಡುಗೆ ಅನಿಲ ಸಿಲಿಂಡರ್‌ ಗಳ ಬೆಲೆಯನ್ನು ಏರಿಕೆ ಮಾಡಿದ ಬೆನ್ನಲ್ಲೇ ವಿರೋಧ ಪಕ್ಷ ಕಾಂಗ್ರೆಸ್‌ ವಿನೂತನವಾಗಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಗ್ಯಾಸ್‌ ಸಿಲಿಂಡರ್‌ ಗಳನ್ನು ಮೇಜಿನ ಮೇಲಿಟ್ಟುಕೊಂಡು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

"ನರೇಂದ್ರ ಮೋದಿ ಓರ್ವ ನಿರ್ದಯ ವ್ಯಕ್ತಿ. ಸರಕಾರವು ಪ್ರತಿಯೊಂದು ಗೃಹಿಣಿಯರ ಬೆನ್ನುಮೂಳೆ ಮುರಿಯುತ್ತಿದೆ. 10 ದಿನಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ 75ರೂ. ಹೆಚ್ಚಾಗಿದೆ. ಫೆಬ್ರವರಿ 4ರಂದು 25ರೂ. ಹೆಚ್ಚಿಸಲಾಗಿದ್ದು, ಈಗ ಮತ್ತೆ 50ರೂ. ಹೆಚ್ಚಿಸಲಾಗಿದೆ. ಇದು ಮಾತ್ರವಲ್ಲದೇ 2020 ಡಿಸೆಂಬರ್‌ ನಿಂದ ಕೇವಲ ಎರಡೇ ತಿಂಗಳಿನಲ್ಲಿ 175ರೂ. ಹೆಚ್ಚಳ ಮಾಡಲಾಗಿದೆ"

"ಮೇಜಿನ ಮೇಲಿರುವ ಈ ಸಿಲಿಂಡರ್‌ ನ ಬೆಲೆ ಡಿಸೆಂಬರ್‌ ತಿಂಗಳಿನಲ್ಲಿ 594ರೂ. ಇತ್ತು. ಈಗ 769ರೂ. ಆಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ₹ 100 ದಾಟಿದೆ. ಪೆಟ್ರೋಲ್, ಡೀಸೆಲ್ ಅಥವಾ ಅಡುಗೆ ಅನಿಲ ಬೆಲೆಗಳಿರಲಿ, ಇದು ಮಧ್ಯಮವರ್ಗ ಮತ್ತು ಬಡವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸರ್ಕಾರವು ಅದನ್ನು ಲೆಕ್ಕಿಸುವುದಿಲ್ಲ" ಎಂದು ಅವರು ಹೇಳಿದರು. ಕೇಂದ್ರವು ಇಲ್ಲಿಯವರೆಗೆ ಹನ್ನೆರಡು ಬಾರಿ ಅಬಕಾರಿ ಸುಂಕವನ್ನು ಸಂಗ್ರಹಿಸಿದೆ ಮತ್ತು  24 ಲಕ್ಷ ಕೋಟಿ ರೂ. ಗಳಿಸಿದೆ ಎಂದು ಅವರು ಹೇಳಿದರು.

"ನಮ್ಮ ಸರ್ಕಾರದಲ್ಲಿ ಅದೇ ಅಬಕಾರಿ ಸುಂಕ ಡೀಸೆಲ್‌ಗೆ ಲೀಟರ್‌ಗೆ 3.50 ರೂ. ಆಗಿತ್ತು (ಈಗ ಅದು ಲೀಟರ್‌ಗೆ 32 ರೂ. ಆಗಿದೆ). ಪೆಟ್ರೋಲ್‌ಗೆ ಲೀಟರ್‌ಗೆ ₹ 9 ಆಗಿತ್ತು, ಈಗ ಅದು ಲೀಟರ್‌ಗೆ ₹ 33 ಆಗಿದೆ. ಇದನ್ನು ಹಿಂತೆಗೆದುಕೊಂಡರೆ ಮಾತ್ರ ಜನಸಾಮಾನ್ಯರಿಗೆ ಲಾಭವಾಗಬಹುದು ”ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News