ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಹವಾಮಾನ ಕಾರ್ಯಕರ್ತೆ ದಿಶಾ ರವಿ ಯಾರು?
ಬೆಂಗಳೂರು,ಫೆ.15: ಸ್ವೀಡನ್ನಿನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ 2018ರಲ್ಲಿ ತನ್ನ 15ರ ಹರೆಯದಲ್ಲಿ ‘ಫ್ರೈಡೇಸ್ ಫಾರ್ ಫ್ಯೂಚರ್(ಎಫ್ಎಫ್ಎಫ್)’ ಅನ್ನು ಆರಂಭಿಸಿದ್ದರು. ಎಫ್ಎಫ್ಎಫ್ ಹೇಳಿಕೊಳ್ಳುವಂತೆ ಅದು ಹವಾಮಾನ ನ್ಯಾಯಕ್ಕಾಗಿ ಜಾಗತಿಕ ಜನತಾ ಆಂದೋಲನವಾಗಿದೆ.
ಬೆಂಗಳೂರಿನ ವೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ರವಿ ಗ್ರೆಟಾ ಜೊತೆ ಕೈಜೋಡಿಸಿದ್ದರು. ‘ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ ’ವನ್ನು ಆರಂಭಿಸಿದ ಆಕೆ ಪ್ರತಿ ಶುಕ್ರವಾರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮುಷ್ಕರಗಳನ್ನು ಆಯೋಜಿಸುತ್ತಿದ್ದರು.
ಕೃಷಿಕರಾಗಿದ್ದ ತನ್ನ ಅಜ್ಜ-ಅಜ್ಜಿ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳೊಂದಿಗೆ ಹೆಣಗಾಡುತ್ತಿದ್ದುದು ದಿಶಾರನ್ನು ಹವಾಮಾನ ಕಾರ್ಯಕರ್ತೆಯಾಗಲು ಪ್ರೇರೇಪಿಸಿತ್ತು. ದಿಶಾ 2020ರಲ್ಲಿ ಆಟೋ ರಿಪೋರ್ಟ್ ಆಫ್ರಿಕಾಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಹೇಳಿಕೊಂಡಿದ್ದರು. ಕೃಷಿಕರ ಬಗ್ಗೆ ದಿಶಾ ಹೊಂದಿದ್ದ ಕಾಳಜಿ ಈಗ ಅವರನ್ನು ಜೈಲಿಗೆ ತಳ್ಳಿದೆ.
ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನಾನಿರತರಾಗಿರುವ ರೈತರನ್ನು ಬೆಂಬಲಿಸಿ ಗ್ರೆಟಾ ಫೆ.4ರಂದು ಟ್ವೀಟಿಸಿದ್ದ ಟೂಲ್ ಕಿಟ್ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಫೆ.13ರಂದು ದಿಶಾರನ್ನು ಅವರ ಬೆಂಗಳೂರು ನಿವಾಸದಿಂದ ಬಂಧಿಸಿದ್ದಾರೆ.
ದಿಶಾ ಈ ಪ್ರಕರಣದಲ್ಲಿ ಬಂಧಿತ ಮೊದಲ ವ್ಯಕ್ತಿಯಾಗಿದ್ದಾರೆ. ದಿಶಾ ಟೂಲ್ ಕಿಟ್ ಅನ್ನು ರೂಪಿಸಿದ ಮತ್ತು ಅದನ್ನು ಶೇರ್ ಮಾಡಿದ ‘ಮುಖ್ಯ ಸಂಚುಕೋರ ’ರಾಗಿದ್ದಾರೆ ಎನ್ನುವುದು ದಿಲ್ಲಿ ಪೊಲೀಸರ ಹೇಳಿಕೆ. ದಿಶಾ ಟೂಲ್ ಕಿಟ್ ನ ಸೃಷ್ಟಿಕರ್ತರೊಂದಿಗೆ ನಿಕಟವಾಗಿ ಕಾರ್ಯಾಚರಿಸಿದ್ದರು ಮತ್ತು ಈ ಪ್ರಕ್ರಿಯೆಯಲ್ಲಿ ಅವರೆಲ್ಲ ಭಾರತ ಸರಕಾರದ ವಿರುದ್ಧ ಅಸಮಾಧಾನವನ್ನು ಹರಡಲು ಖಲಿಸ್ತಾನಿ ಪೋಯೆಟಿಕ್ ಜಸ್ಟೀಸ್ ಫೌಂಡೇಷನ್ ಜೊತೆ ಸೇರಿದ್ದರು ಎಂದು ಪೊಲೀಸರು ಟ್ವಿಟರ್ನಲ್ಲಿ ಪ್ರತಿಪಾದಿಸಿದ್ದಾರೆ. ಪ್ರತಿಭಟನೆಗಳಿಗೆ ಖಲಿಸ್ತಾನಿ ಅಥವಾ ಪ್ರತ್ಯೇಕತಾವಾದಿ ಸಿಖ್ ಗುಂಪುಗಳು ಆರ್ಥಿಕ ನೆರವು ಒದಗಿಸುತ್ತಿವೆ ಎಂದು ಸರಕಾರವು ಆಪಾದಿಸಿದೆ.
ದಿಶಾ ಬಂಧನವು ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ದಿಗ್ಭ್ರಾಂತರನ್ನಾಗಿಸಿದೆ. ತನಗೆ ತುಂಬ ಆಘಾತವಾಗಿದೆ ಎಂದು ಜೂನ್ ವರೆಗೆ ಸ್ವಯಂಸೇವಕರಾಗಿ ಎಫ್ಎಫ್ಎಫ್ ಜೊತೆ ಕಾರ್ಯ ಮಾಡಿದ್ದ ಅರವಿಂದ (27) ಹೇಳಿದರು. ‘ನಾವು ಒಂದು ಆಂದೋಲನವಾಗಿದ್ದೇವೆ,ಪ್ರಾಮಾಣಿಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಜನರ ಒಂದು ಗುಂಪಾಗಿದ್ದೇವೆ ಅಷ್ಟೇ. ಮುಷ್ಕರಗಳನ್ನು ನಡೆಸಲು ನಾವು ಪೊಲೀಸರ ಪೂರ್ವಾನುಮತಿಯನ್ನು ಪಡೆದಿದ್ದೇವೆ. ಆದಾಗ್ಯೂ ದಿಶಾರ ಬಂಧನ ಸಂಪೂರ್ಣ ಆಘಾತಕಾರಿಯಾಗಿದೆ ’ ಎಂದರು.
ದಿಶಾ ಪರಿಸರ ನಾಶದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ತನ್ನ ನೀತಿಗಳಿಗೆ ಅಂಟಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಸದಾ ಕ್ರಿಯಾಶೀಲರಾಗಿರುತ್ತಿದ್ದ ಅವರು ಯಾವುದೇ ವಿಷಯದ ಬಗ್ಗೆ ಎಲ್ಲಿ ಬೇಕಾದರೂ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ದಿಶಾರ ಇತರ ಕೆಲವು ಸ್ನೇಹಿತರು ತಿಳಿಸಿದರು. ಭಾರತವನ್ನು ನುಂಗುತ್ತಿರುವ ಪರಿಸರ ಬಿಕ್ಕಟ್ಟಿನ ಕುರಿತು ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸುತ್ತಿರುವ ಯುವ ಕಾರ್ಯಕರ್ತೆಯಾಗಿ ದಿಶಾರ ಕಾರ್ಯಗಳ ಬಗ್ಗೆ ದಿ ಗಾರ್ಡಿಯನ್,ವೋಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಮಾಧ್ಯಮಗಳು ವರದಿ ಮಾಡಿವೆ.
ಕೃಪೆ: scroll.in