×
Ad

ಉ.ಪ್ರದೇಶ:ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಜೀವಂತ ಸುಟ್ಟು ಕೊಂದ ಕುಟುಂಬಸ್ಥರು

Update: 2021-02-15 20:58 IST
ಸಾಂದರ್ಭಿಕ ಚಿತ್ರ

ಗೋರಖಪುರ,ಫೆ.15: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣವೊಂದರಲ್ಲಿ ಮುಸ್ಲಿಂ ಯುವಕನನ್ನು ಪ್ರೇಮಿಸಿದ್ದ ಯುವತಿಯನ್ನು ಆಕೆಯ ಕುಟುಂಬ ಸದಸ್ಯರೇ ಜೀವಂತವಾಗಿ ದಹನಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಹತ್ಯೆಗಾಗಿ ಆಕೆಯ ಕುಟುಂಬವು ಸುಪಾರಿ ಹಂತಕ ವರುಣ್ ತಿವಾರಿ ಎಂಬಾತನಿಗೆ 1.5 ಲ.ರೂ.ಗಳನ್ನು ನೀಡಿತ್ತು. ಘಟನೆಗೆ ಸಂಬಂಧಿಸಿದಂತೆ ಹತ ಯುವತಿಯ ತಂದೆ ಕೈಲಾಷ್ ಯಾದವ್, ಸೋದರ ಅಜಿತ ಯಾದವ್, ಭಾವ ಸತ್ಯಪ್ರಕಾಶ್ ಯಾದವ್ ಮತ್ತು ಇನ್ನೋರ್ವ ವ್ಯಕ್ತಿ ಸೀತಾರಾಮ ಯಾದವ್ ಅವರನ್ನು ರವಿವಾರ ಬಂಧಿಸಲಾಗಿದೆ. ಹತ್ಯೆಗಾಗಿ ಬಳಸಿದ್ದ ಪೆಟ್ರೋಲ್ ಕ್ಯಾನ್ ಮತ್ತು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಸುಪಾರಿ ಹಂತಕ ತಿವಾರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಫೆ.4ರಂದು ಸಂತ ಕಬೀರ ನಗರ ಜಿಲ್ಲೆಯ ಧಾನಘಾಟಾ ಪೊಲೀಸ್ ಠಾಣಾ ವ್ಯಾಪ್ತಿಯ ಜಿಗಿನಾ ಗ್ರಾಮದಲ್ಲಿ ಅರ್ಧ ಸುಟ್ಟಿದ್ದ ಯುವತಿಯ ಶವ ಪತ್ತೆಯಾಗಿತ್ತು. ಲಭ್ಯ ಮಾಹಿತಿಗಳ ಆಧಾರದಲ್ಲಿ ಮೃತ ಯುವತಿಯನ್ನು ಗೋರಖಪುರದ ಬೇಲಘಾಟ್ ನಿವಾಸಿ ರಂಜನಾ ಯಾದವ್ ಎಂದು ಪೊಲೀಸರು ಗುರುತಿಸಿದ್ದರು.

ತನ್ನ ಮಗಳು ಮುಸ್ಲಿಂ ಯುವಕನೋರ್ವನೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದಳು. ಸಂಬಂಧವನ್ನು ಕಡಿದುಕೊಳ್ಳಲು ಆಕೆ ನಿರಾಕರಿಸಿದಾಗ ತನ್ನ ಮಗ ಮತ್ತು ಅಳಿಯನೊಂದಿಗೆ ಸೇರಿ ಆಕೆಯ ಹತ್ಯೆಗಾಗಿ ಮಹುಲಿ ನಿವಾಸಿ ತಿವಾರಿಗೆ ಸುಪಾರಿ ನೀಡಿದ್ದಾಗಿ ಕೈಲಾಷ್ ಯಾದವ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಎಸ್‌ಪಿ ಕೌಸ್ತುಭ ತಿಳಿಸಿದರು.

ಆರೋಪಿಗಳಲ್ಲೋರ್ವ ಫೆ.3ರಂದು ಯುವತಿಯನ್ನು ಬೈಕ್‌ನಲ್ಲಿ ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದ. ಇತರ ಆರೋಪಿಗಳು ಆತನೊಂದಿಗೆ ಸೇರಿಕೊಂಡು ಯುವತಿಯ ಕೈಗಳನ್ನು ಕಟ್ಟಿ ಹಾಕಿ,ಕೂಗದಂತೆ ಬಾಯಿಗೆ ಬಟ್ಟೆ ತುರುಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News