ಯೋಧರಿಂದ ಅಪ್ರಾಪ್ತ ಬಾಲಕಿಯ ಅಪಹರಣ, ಕಿರುಕುಳಕ್ಕೆ ಯತ್ನಿಸಿದ ಪ್ರಕರಣದ ತನಿಖೆ ನಡೆಸಿ: ಮೆಹಬೂಬಾ ಮುಫ್ತಿ

Update: 2021-02-16 15:42 GMT

ಶ್ರೀನಗರ, ಫೆ. 16: ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ, ಕಿರುಕುಳಕ್ಕೆ ಯತ್ನಿಸಿದ ಹಾಗೂ ಈ ಸಂಬಂಧ ದಾಖಲಿಸಲಾದ ಎಫ್‌ಐಆರ್ ಅನ್ನು ಹಿಂದೆಗೆಯುವಂತೆ ಬಾಲಕಿಯ ಕುಟುಂಬಕ್ಕೆ ಒತ್ತಡ ಹೇರುತ್ತಿರುವ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಮಂಗಳವಾರ ಆಗ್ರಹಿಸಿದ್ದಾರೆ.

‘‘ಸೇನೆಯ ಮೂವರು ಯೋಧರು 9 ವರ್ಷದ ಬಾಲಕಿಯನ್ನು ಅಪಹರಿಸಿ, ಕಿರುಕುಳ ನೀಡಲು ಪ್ರಯತ್ನಿಸಿದರು ಎಂದು ಬಂಡಿಪೋರಾದ ನಿವಾಸಿಗಳು ಆರೋಪಿಸಿದ್ದಾರೆ. ಈಗ ಎಫ್‌ಐಆರ್ ಹಿಂದೆಗೆಯುವಂತೆ ಬಾಲಕಿಯ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ. ಇದು ನ್ಯಾಯಕ್ಕೆ ಅವಮಾನ. ಆದುದರಿಂದ ಕೂಡಲೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಅಲ್ಲದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’’ ಎಂದು ಮುಫ್ತಿ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆಯ ಅಜಾಸ್ ಪ್ರದೇಶದಲ್ಲಿ ಫೆಬ್ರವರಿ 10ರಂದು ಈ ಘಟನೆ ನಡೆದಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಮೂವರು ವ್ಯಕ್ತಿಗಳು ಬಾಲಕಿಯನ್ನು ಅಪಹರಿಸಲು ಯತ್ನಿಸಿದರು. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಅವರನ್ನು ಸ್ಥಳದಲ್ಲೇ ಸೆರೆ ಹಿಡಿದರು’’ ಎಂದು ಬಂಡಿಪೋರಾದ ಪೊಲೀಸ್ ಅಧೀಕ್ಷಕ ರಾಹುಲ್ ಮಲ್ಲಿಕ್ ಹೇಳಿದ್ದಾರೆ. ಆದರೆ, ಮಲ್ಲಿಕ್ ಅವರು ಬಂಧಿತರನ್ನು ಗುರುತಿಸಿಲ್ಲ ಅಥವಾ ಅವರು ಸೇನಾ ಸಿಬ್ಬಂದಿಗಳೇ ಎಂಬುದನ್ನು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News