ದ್ವೇಷ ಭಾಷಣದ ಆರೋಪ: ಎನ್‌ಸಿ ನಾಯಕ ಹಿಲಾಲ್ ಲೋನೆ ಬಂಧನ
ಶ್ರೀನಗರ, ಫೆ. 16: ಕಳೆದ ವರ್ಷ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ (ಡಿಡಿಸಿ) ಸಂದರ್ಭ ಬಂಡಿಪೋರಾದಲ್ಲಿ ನಡೆದ ರ‍್ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕ ಹಿಲಾಲ್ ಲೋನೆ ಅವರನ್ನು ಯುಎಪಿಎ ಅಡಿಯಲ್ಲಿ ಸೋಮವಾರ ಬಂಧಿಸಲಾಗಿದೆ.
ನ್ಯಾಷನಲ್ ಕಾನ್ಫರೆನ್ಸ್‌ನ ಸಂಸತ್ ಸದಸ್ಯ ಮುಹಮ್ಮದ್ ಅಕ್ಬರ್ ಲೋನೆ ಅವರ ಪುತ್ರರಾಗಿರುವ ಹಿಲಾಲ್ ಲೋನೆ ಅವರನ್ನು ಕಳೆದ ಒಂದು ವರ್ಷದಿಂದ ಸೆರೆಯಲ್ಲಿದ್ದ ಇಲ್ಲಿನ ಶಾಸಕರ ಹಾಸ್ಟೆಲ್‌ನಿಂದ ಸೋಮವಾರ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಉತ್ತರಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಯುಎಪಿಎ ಅಡಿಯ ವಿವಿಧ ಕಲಂಗಳ ಅಡಿಯಲ್ಲಿ ಹಿಲಾಲ್ ಲೋನೆ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿಡಿಸಿ ಚುನಾವಣೆ ಹಿನ್ನೆಲೆಯಲ್ಲಿ ಹಾಜಿನ್‌ನಲ್ಲಿ ನಡೆದ ಸಾರ್ವಜನಿಕ ಪ್ರಚಾರ ರ‍್ಯಾಲಿಯ ಸಂದರ್ಭ ದ್ವೇಷ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 25ರಂದು ಬಂಡಿಪೋರಾ ಸುಂಬಾಲ್ ಪ್ರದೇಶದಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಂತರ ಇಲ್ಲಿನ ಶಾಸಕರ ಹಾಸ್ಟೆಲ್‌ಗೆ ವರ್ಗಾಯಿಸಲಾಗಿತ್ತು.