ಮೋದಿ ಆಡಳಿತದಲ್ಲಿ ಭಾರತ ಇನ್ನೂ ಪ್ರಜಾಸತ್ತಾತ್ಮಕವಾಗಿದೆ ಎಂಬ ಭ್ರಮೆಯಲ್ಲಿ ಬೈಡನ್

Update: 2021-02-17 05:40 GMT

ಹೊಸದಿಲ್ಲಿ,ಫೆ.16: ಶೀಘ್ರ ಬಿಡುಗಡೆಯಾಗಲಿರುವ ‘ಟು ಕಿಲ್ ಎ ಡೆಮಾಕ್ರಸಿ: ಇಂಡಿಯಾಸ್ ಪ್ಯಾಸೇಜ್ ಟು ಡೆಸ್ಪಟಿಸಂ’ ಕೃತಿಯ ಸಹಲೇಖಕರಾಗಿರುವ ದೇಬಶಿಷ್ ರಾಯ್ ಚೌಧುರಿ ಅವರು ಬರೆದಿರುವ ಲೇಖನವೊಂದನ್ನು time.com ಪ್ರಕಟಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ದಿನೇದಿನೇ ಕುಸಿಯುತ್ತಿರುವ ಭಾರತವು ಪ್ರಜಾಸತ್ತಾತ್ಮಕ ಮಿತ್ರರಾಷ್ಟ್ರವೆಂಬ ಭ್ರಮೆಯಲ್ಲಿರುವ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಇನ್ನೆಷ್ಟು ದಿನ ಅದರಲ್ಲಿ ಮುಳುಗಿರುತ್ತಾರೆ ಎಂದು ಚೌಧುರಿ ತನ್ನ ಲೇಖನದಲ್ಲಿ ಪ್ರಶ್ನಿಸಿದ್ದಾರೆ.

ಭಾರತ ಮತ್ತು ಅಮೆರಿಕ ತಮ್ಮ ಸಂಬಂಧದ ಬಗ್ಗೆ ಮಾತನಾಡುವಾಗೆಲ್ಲ ‘ಪ್ರಜಾಪ್ರಭುತ್ವ’ ಶಬ್ದ ವ್ಯಾಪಕವಾಗಿ ಬಳಕೆಯಾಗುತ್ತದೆ. ಪ್ರಜಾಪ್ರಭುತ್ವವು ಉಭಯ ದೇಶಗಳು ಹಂಚಿಕೊಂಡಿರುವ ಮೌಲ್ಯಗಳು ಮತ್ತು ಸಹಜ ಪಾಲುದಾರರ ನಡುವಿನ ಸಾಮಾನ್ಯ ಸಂಬಂಧದ ಬುನಾದಿಯಾಗಿದೆ ಎಂಬಂತಹ ಪದಗುಚ್ಛಗಳು ಇವೆರಡು ದೇಶಗಳ ನಡುವಿನ ಮಾತುಕತೆಗಳಲ್ಲಿ ಆಗಾಗ್ಗೆ ಹಣಕುತ್ತಲೇ ಇರುತ್ತವೆ. ‘ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ’ ಮತ್ತು ‘ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ’ ತಾವು ಇದರಲ್ಲಿ ಏಕೆ ಒಟ್ಟಾಗಿದ್ದೇವೆ ಎನ್ನುವುದನ್ನು ಜಗತ್ತು ಮರೆಯಲು ಬಿಡುವುದಿಲ್ಲ ಎಂದು ಚೌಧುರಿ ಲೇಖನದಲ್ಲಿ ಬರೆದಿದ್ದಾರೆ.

ಬೈಡನ್ ಅಮೆರಿಕದ ಅಧ್ಯಕ್ಷರಾದ ಬಳಿಕ ಫೆ.8ರಂದು ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದನ್ನು ನೆನಪಿಸಿರುವ ಚೌಧರಿ, ಉಭಯ ದೇಶಗಳ ನಡುವಿನ ಸಾಮಾನ್ಯ ಬಂಧದ ಕುರಿತು ಮೋದಿಯವರಿಗೆ ನೆನಪಿಸುವುದು ಕೆಟ್ಟ ವಿಚಾರವೇನಲ್ಲ ಎಂದು ಮಾತ್ರ ಬೈಡನ್ ಭಾವಿಸಿದ್ದಿರಬೇಕು ಎಂದಿದ್ದಾರೆ. ‘ವಿಶ್ವಾದ್ಯಂತ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಮತ್ತು ಮಾನದಂಡಗಳನ್ನು ರಕ್ಷಿಸುವ ತನ್ನ ಬಯಕೆಗೆ ಒತ್ತು ನೀಡಿರುವ ಅಧ್ಯಕ್ಷರು, ಲೋಕತಾಂತ್ರಿಕ ಮೌಲ್ಯಗಳಿಗೆ ಸಮಾನ ಬದ್ಧತೆಯು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಬುನಾದಿಯಾಗಿದೆ ಎಂದು ಹೇಳಿದ್ದಾರೆ’ ಎಂಬ ಶ್ವೇತಭವನದ ಹೇಳಿಕೆಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಚೀನಾದ ಎದುರು ಸೈದ್ಧಾಂತಿಕ ಮತ್ತು ವ್ಯೂಹಾತ್ಮಕ ಅಸ್ತ್ರವನ್ನಾಗಿ ಭಾರತವನ್ನು ನೋಡಲು ಅಮೆರಿಕ ಬಯಸುತ್ತಿದೆ, ಆದರೆ ಭಾರತದಲ್ಲಿ ಪ್ರಜಾಸತ್ತಾತ್ಮಕ ಮಾನದಂಡಗಳು ತ್ವರಿತವಾಗಿ ಅವನತಿಗೊಳ್ಳುತ್ತಿರುವುದನ್ನು ಕಡೆಗಣಿಸುವುದು ಸುಲಭವಲ್ಲ. ಮೋದಿಯವರ ಹಿಂದು ರಾಷ್ಟ್ರವಾದಿ ಬಿಜೆಪಿಯಡಿ ನಾಗರಿಕ ಸ್ವಾತಂತ್ರಗಳ ಮೇಲೆ ಪ್ರತಿದಿನವೂ ನಡೆಯುತ್ತಿರುವ ಹಲ್ಲೆಗಳು ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಬೆದರಿಕೆಗಳು 2019ರಲ್ಲಿ ಮೋದಿಯವರು ಪುನರಾಯ್ಕೆಗೊಂಡ ಬಳಿಕ ಗಮನಾರ್ಹವಾಗಿ ಹೆಚ್ಚಿವೆ. ದ್ವೇಷ ಭಾಷಣಗಳು ವಿಜೃಂಭಿಸುತ್ತಿವೆ, ಶಾಂತಿಯುತ ಭಿನ್ನಾಭಿಪ್ರಾಯಗಳನ್ನು ಅಪರಾಧವನ್ನಾಗಿ ಬಿಂಬಿಸಲಾಗುತ್ತಿದೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘ-ಸಂಸ್ಥೆಗಳು ಹೊಸ ಹೊಸ ನಿರ್ಬಂಧಗಳನ್ನು ಎದುರಿಸುತ್ತಿವೆ, ಕೀಳರಿಮೆ ಬೆಳೆಸಿಕೊಂಡಿರುವ ನ್ಯಾಯಾಲಯಗಳು ಕುರುಡಾಗಿದ್ದು ಜೈಲುಗಳು ರಾಜಕೀಯ ಕೈದಿಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರಿಂದ ತುಂಬುತ್ತಿವೆ ಎಂದು ಲೇಖನವು ಬೆಟ್ಟು ಮಾಡಿದೆ.

ಕಳೆದ ರವಿವಾರ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಟೂಲ್‌ಕಿಟ್ ಪ್ರಕರಣದಲ್ಲಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ‘ಒಳಸಂಚಿನ’ ಆರೋಪದಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಬಂಧನದ ವಾರಂಟ್‌ಗಳನ್ನು ಹೊರಡಿಸಲಾಗಿದೆ. 2014ರಲ್ಲಿ ಇಕನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್‌ನ ಪ್ರಜಾಪ್ರಭುತ್ವ ಸೂಚಿಯಲ್ಲಿ 27ನೇ ಸ್ಥಾನದಲ್ಲಿದ್ದ ಭಾರತವು ಈ ತಿಂಗಳ ಆರಂಭದಲ್ಲಿ 53ನೇ ಸ್ಥಾನಕ್ಕೆ ಕುಸಿದಿದೆ. ಸ್ವೀಡನ್ನಿನ ವಿ-ಡೆಮ್ ಇನ್‌ಸ್ಟಿಟ್ಯೂಟ್ ಪಟ್ಟಿ ಮಾಡಿರುವ ನಿರಂಕುಶತೆಯತ್ತ ವೇಗವಾಗಿ ಹೆಜ್ಜೆಗಳನ್ನು ಹಾಕುತ್ತಿರುವ ವಿಶ್ವದ 10 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ಚೌಧುರಿ ಬರೆದಿದ್ದಾರೆ.

ರೈತರ ಪ್ರತಿಭಟನೆಯನ್ನು ತಾನು ನಿರ್ವಹಿಸುತ್ತಿರುವ ರೀತಿಯಿಂದಾಗಿ ಮೋದಿಯವರು ಹೆಚ್ಚಿನ ಜಾಗತಿಕ ಗಮನವನ್ನು ಪಡೆಯುತ್ತಿದ್ದಾರೆ. ರಿಹಾನ್ನಾ, ಗ್ರೆಟಾ ಥನ್‌ಬರ್ಗ್, ಸುಸನ್ ಸಾರಾಂಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರಿಯ ಪುತ್ರಿ ಮೀನಾ ಹ್ಯಾರಿಸ್ ಅವರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದಾಗ ಅವರ ಬಾಯಿ ಮುಚ್ಚಿಸಲು ಚೀನಾದ ತಂತ್ರವನ್ನು ಬಳಸಿದ ಭಾರತ ಸರಕಾರವು ಇವೆಲ್ಲ ಪಟ್ಟಭದ್ರ ಹಿತಾಸಕ್ತಿಗಳ ಗುಂಪುಗಳಾಗಿವೆ ಮತ್ತು ಅಂತರರಾಷ್ಟ್ರೀಯ ಸಂಚಿನ ಭಾಗವಾಗಿದ್ದಾರೆ ಎಂದು ಜರಿದಿತ್ತು. ಹರ್ಯಾಣದಲ್ಲಿ 23ರ ಹರೆಯದ ಕಾರ್ಮಿಕ ಒಕ್ಕೂಟದ ನಾಯಕಿಯ ಬಂಧನ ಮತ್ತು ಪೊಲೀಸ್ ಕಸ್ಟಡಿಯಲ್ಲಿ ಆಕೆಗೆ ಲೈಂಗಿಕ ಕಿರುಕುಳಗಳನ್ನು ಬೆಟ್ಟು ಮಾಡಿದ್ದಕ್ಕಾಗಿ ಹ್ಯಾರಿಸ್ ವಿರುದ್ಧ ಬಿಜೆಪಿ ಬೆಂಬಲಿಗರು ಟ್ರೋಲ್‌ಗಳ ಮಹಾಪೂರವನ್ನೇ ಹರಿಸಿದ್ದರು ಎನ್ನುವುದನ್ನು ಲೇಖನವು ಉಲ್ಲೇಖಿಸಿದೆ.

ಚೀನಾ ತನ್ನ ಜಾಗತಿಕ ಶಕ್ತಿ ಮತ್ತು ಪ್ರಭಾವವನ್ನು ವೃದ್ಧಿಸಿಕೊಳ್ಳುತ್ತಿರುವ ಸಮಯದಲ್ಲಿಯೇ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬೈಡನ್‌ಗೆ ಮುಂದಿನ ದಿನಗಳು ಸುಲಭವಿಲ್ಲ. ಅವರು ಚೀನಾದ ವಿರುದ್ಧ ಜಾಗತಿಕ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸುವ ಹವಣಿಕೆಯಲ್ಲಿದ್ದಾರೆ, ಜೊತೆಗೆ ಅವರು ಅಮೆರಿಕದ ಭೂರಾಜಕೀಯ ಹಿತಾಸಕ್ತಿಗಳಿಗೂ ಹಿಂದಿಗಿಂತ ಹೆಚ್ಚು ಗಮನವನ್ನು ಹರಿಸುವ ಅಗತ್ಯವಿದೆ. ಆದರೆ ಇಂತಹ ಪ್ರಜಾಸತ್ತಾತ್ಮಕ ಕೂಟದ ಸದಸ್ಯ ರಾಷ್ಟ್ರಗಳು ಪೂರ್ಣ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿರಬೇಕಾಗುತ್ತದೆ. ಮಿತ್ರರಾಷ್ಟ್ರಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಡೆಗಣಿಸಿ ಮಾನವ ಹಕ್ಕುಗಳನ್ನು ಗೌರವಿಸುವಂತೆ ಚೀನಾದ ಮೇಲೆ ಒತ್ತಡವನ್ನು ಹೇರುವುದು ಬೈಡನ್‌ಗೆ ಶೋಭೆಯಲ್ಲ ಮತ್ತು ಇಲ್ಲಿಯೇ ಮೋದಿ ಸರಕಾರವು ಬೈಡನ್‌ಗೆ ತಲೆನೋವು ತರುತ್ತಿದೆ.

ಮೋದಿ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರನ್ನು ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಾರ್ಟಿನ್ ಲೂಥರ್ ಕಿಂಗ್ ಮೆಮೋರಿಯಲ್‌ಗೆ ಕರೆದೊಯ್ದಿದ್ದರು. ‘ನಾವು ಕಿಂಗ್ ಮತ್ತು ಗಾಂಧಿಯವರ ಬೋಧನೆಗಳ ಬಗ್ಗೆ ಮತ್ತು ನಮ್ಮ ದೇಶಗಳಲ್ಲಿಯ ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಧರ್ಮಗಳ ರಕ್ಷಣೆಯ ಬಗ್ಗೆ ಚರ್ಚಿಸಿದೆವು’ ಎಂದು ಒಬಾಮಾ ಬಳಿಕ ಟೈಮ್‌ನಲ್ಲಿ ಬರೆದಿದ್ದರು. ತನ್ನ ಅಧಿಕಾರಾವಧಿಯಲ್ಲಿ ಒಬಾಮಾ ಧಾರ್ಮಿಕ ಸ್ವಾತಂತ್ರಗಳನ್ನು ಎತ್ತಿಹಿಡಿಯುವಂತೆ ಭಾರತವನ್ನು ಆಗ್ರಹಿಸಿದ್ದರು ಮತ್ತು ಭಾರತದಲ್ಲಿ ಇಂದು ಮೆರೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಗಾಂಧಿಯವರಿಗೆ ಖಂಡಿತವಾಗಿಯೂ ಆಘಾತವನ್ನುಂಟು ಮಾಡುತ್ತಿತ್ತು ಎಂದು ವಿಷಾದಿಸಿದ್ದರು.

ಆದರೆ ಒಬಾಮಾರ ಬಳಿಕ ಅಧಿಕಾರಕ್ಕೇರಿದ್ದ ಡೊನಾಲ್ಡ್ ಟ್ರಂಪ್‌ರಲ್ಲಿ ಇಂತಹ ಯಾವುದೇ ಸೈದ್ಧಾಂತಿಕ ಸಂದಿಗ್ಧತೆಗಳಿರಲಿಲ್ಲ. 2019ರಲ್ಲಿ ಭಾರೀ ಬಹುಮತದಿಂದ ಪುನರಾಯ್ಕೆಗೊಂಡ ಬಳಿಕ ಮೋದಿ ತನ್ನ ಕಟ್ಟರ್‌ ಅಜೆಂಡಾವನ್ನು ಕಾರ್ಯರೂಪಕ್ಕೆ ತಂದು ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವಂತಹ ಕ್ರಮಗಳನ್ನು ಕೈಗೊಂಡಾಗ ಟ್ರಂಪ್ ಆಡಳಿತವು ಆ ಬಗ್ಗೆ ತುಟಿಪಿಟಕ್ಕೆಂದಿರಲಿಲ್ಲ. ಆದರೆ ಬೈಡನ್ ಹೀಗೆ ಮೌನವಾಗಿರುವಂತಿಲ್ಲ. ಭಾರತದಲ್ಲಿ ನಾಗರಿಕ ಸ್ವಾತಂತ್ರಗಳ ಮೇಲಿನ ದಾಳಿಗಳು ಹೆಚ್ಚಾಗಿರುವ ಮತ್ತು ಇಡೀ ಜಗತ್ತಿಗೇ ಇದರ ಅರಿವು ಇರುವ ಸಮಯದಲ್ಲಿ ಅವರು ಅಧಿಕಾರಕ್ಕೇರಿದ್ದಾರೆ ಎಂದು ಲೇಖನವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News