×
Ad

ಚಾರ್‌ಧಾಮ್ ರಸ್ತೆ ಅಗಲೀಕರಣಕ್ಕೂ, ಹಿಮಪಾತ ದುರಂತಕ್ಕೂ ನಂಟಿಲ್ಲ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

Update: 2021-02-17 21:13 IST

ಚಾರ್ ಧಾಮ್ ಹೆದ್ದಾರಿ

 ಹೊಸದಿಲ್ಲಿ,ಫೆ.17: ಉತ್ತರಾಖಂಡದ ಚಾರ್‌ಧಾಮ್ ರಸ್ತೆ ಅಗಲೀಕರಣ ಯೋಜನೆಗೂ ಹಾಗೂ ಆ ರಾಜ್ಯದಲ್ಲಿ ಇತ್ತೀಚೆಗೆ 50ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಹಿಮಪಾತದ ಘಟನೆಗೂ ಯಾವುದೇ ನಂಟಿಲ್ಲವೆಂದು ಕೇಂದ್ರ ಸರಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ರೊಹಿನ್‌ಟನ್ ನಾರಿಮನ್ ನೇತೃತ್ವದ ನ್ಯಾಯಪೀಠದ ಮುಂದೆ ಕೇಂದ್ರ ಸರಕಾರದ ಅಟಾರ್ನಿ ಜನರಲ್ ಈ ಸ್ಪಷ್ಟೀಕರಣ ನೀಡಿದ್ದಾರೆ. ಉತ್ತರಾಖಂಡದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಹೆದ್ದಾರಿ ಕಾಮಗಾರಿ ಯೋಜನೆಯ ಮೇಲೆ ನಿಗಾವಿರಿಸಲು ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ವರಿಷ್ಠ ರವಿ ಚೋಪ್ರಾ ಅವರು ಚಾರ್‌ಧಾಮ್ ರಸ್ತೆ ಅಗಲೀಕರಣ ಯೋಜನೆಗೂ, ಹಿಮಪಾತ ದುರಂತಕ್ಕೂ ಪರಸ್ಪರ ಸಂಬಂಧವಿದೆಯೆಂದು ಹೇಳಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆಂದು ವೇಣುಗೋಪಾಲ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

‘‘ರಕ್ಷಣಾ ಸಚಿವಾಲಯದ ಪ್ರಕಾರ, ಇವೆರಡರ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ ಈ ಆರೋಪಗಳ ಬಗ್ಗೆ ನಾವು ಉತ್ತರಿಸಲು ಬಯಸಿದ್ದು, ಅದಕ್ಕೆ ಸಮಯಾವಕಾಶದ ಅಗತ್ಯವಿದೆ’’ ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.

 ಆನಂತರ ಸುಪ್ರೀಂಕೋರ್ಟ್ ಈ ವಿಷಯದ ಕುರಿತಾಗಿ ಎರಡು ವಾರಗಳೊಳಗೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

889 ಕಿ.ಮೀ. ವಿಸ್ತೀರ್ಣದ ರಸ್ತೆ ಅಗಲೀಕರಣ ಯೋಜನೆಯು ಉತ್ತರಾಖಂಡದ ನಾಲ್ಕು ಪ್ರಮುಖ ಯಾತ್ರಾಸ್ಥಳಗಳಾದ ಕೇದಾರನಾಥ, ಬದರೀನಾಥ, ಗಂಗೋತ್ರಿ ಹಾಗೂ ಯಮುನೋತ್ರಿಯನ್ನು ಸಂಪರ್ಕಿಸುತ್ತಿದೆ. ಭಾರತ-ಚೀನಾ ಗಡಿಗೆ ಸೇನಾಪಡೆಗಳ ಸಂಚಾರಕ್ಕೆ ಅನುಕೂಲವಾಗಲು ರಸ್ತೆಗಳ ಅಗಲೀಕರಣವು ವ್ಯೂಹಾತ್ಮಕವಾಗಿ ಮಹತ್ವವಾಗಿದೆಯೆಂದು ಕೇಂದ್ರ ಸರಕಾರ ಹೇಳಿಕೊಂಡಿದೆ.

  ಚೋಪ್ರಾ ಅವರು ಸುಪ್ರೀಂಕೋರ್ಟ್‌ಗೆ ಫೆಬ್ರವರಿ 13ರಂದು ಬರೆದ ಪತ್ರದಲ್ಲಿ ಹೆದ್ದಾರಿಗಳ ಅಗಲೀಕರಣಕ್ಕಿಂತಲೂ ಪ್ರಾಕೃತಿಕ ದುರಂತಗಳನ್ನು ತಡೆಗಟ್ಟುವುದು ಹೆಚ್ಚು ಮಹತ್ವವಾದುದೆಂದು ಅಭಿಪ್ರಾಯಿಸಿದ್ದರು ಹಾಗೂ ಉತ್ತರಾಖಂಡದ ಮೂರು ಹೆದ್ದಾರಿಗಳಲ್ಲಿ ಭೂಕುಸಿತದ ಅಪಾಯವಿರುವಂತಹ ಹಲವಾರು ಸ್ಥಳಗಳಿವೆ ಎಂದು ಅವರು ಗಮನಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News