ಮಧ್ಯಪ್ರದೇಶ: ಬಸ್ ಅಪಘಾತ; ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆ
ಸಿಧಿ (ಮಧ್ಯಪ್ರದೇಶ), ಫೆ. 17: ಇಂದು ಬೆಳಗ್ಗೆ ಮತ್ತೆರೆಡು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಧಿಯಲ್ಲಿ ಮಂಗಳವಾರ ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸು ರಸ್ತೆಯಿಂದ ಜಾರಿ ನೀರಿನ ಕಾಲುವೆಗೆ ಬಿದ್ದು ಸಂಭವಿಸಿದ ದುರಂತದಲ್ಲಿ ಇಬ್ಬರು ಮಕ್ಕಳು, 20 ಮಹಿಳೆಯರು ಸೇರಿದಂತೆ 47 ಜನರು ಸಾವನ್ನಪ್ಪಿದ್ದರು.
ನಿನ್ನೆ ತಡ ರಾತ್ರಿ ಪರಿಹಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಆರಂಭಿಸಿದಾಗ ಕಾಲುವೆಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಸಿಧಿಯ ಪೊಲೀಸ್ ಹೆಚ್ಚುವರಿ ಆಯುಕ್ತೆ ಅಂಜುಲಾಟಾ ಪಾಟ್ಲೆ ಅವರು ತಿಳಿಸಿದ್ದಾರೆ. ಎರಡು ಮೃತದೇಹಗಳಲ್ಲಿ ಒಂದು ಮೃತದೇಹ ದುರಂತ ಸಂಭವಿಸಿದ ಸ್ಥಳದಿಂದ 10 ಕಿ.ಮೀ. ದೂರದಲ್ಲಿರುವ ರೇವಾ ಜಿಲ್ಲೆಯ ಸಮೀಪದ ಗೋವಿಂದಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಲುವೆಯಲ್ಲಿ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.