ಹಾಡಹಗಲೇ ವಕೀಲ ದಂಪತಿಯ ಹತ್ಯೆಗೈದ ದುಷ್ಕರ್ಮಿಗಳು
ಹೈದರಾಬಾದ್: ತೆಲಂಗಾಣದ ಹೈಕೋರ್ಟ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರಸಿದ್ಧ ವಕೀಲ ದಂಪತಿಯನ್ನು ಇಂದು ಮಧ್ಯಾಹ್ನ ಮಂಘಾನಿ ಹಾಗೂ ಪೆದ್ದಪಲ್ಲಿ ಪಟ್ಟಣಗಳ ನಡುವಿನ ಪ್ರಮುಖ ರಸ್ತೆಯಲ್ಲಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ.
ದಂಪತಿಗಳಾದ ಗಟ್ಟು ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ಕಾರಿನಲ್ಲಿ ಹಿಂತಿರುತ್ತಿದ್ದಾಗ ಈ ಭೀಕರ ಕೃತ್ಯ ನಡೆದಿದೆ. ಘಟನೆಯನ್ನು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಹಲವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ದಾಳಿಕೋರರು ರಸ್ತೆಯಲ್ಲಿ ವ್ಯಕ್ತಿಯನ್ನು ಅಟ್ಟಿಸಿಕೊಂಡು ಕೊಲೆ ಮಾಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾಮನ್ ರಾವ್ ಬಳಿ ವ್ಯಕ್ತಿಯೊಬ್ಬ ದಾಳಿ ಮಾಡಿದ್ದು ಯಾರೆಂದು ಕೇಳಿದಾಗ, ಕುಂಟಿ ಶ್ರೀನಿವಾಸ್ ಎಂದು ಹೇಳಿದ್ದಾರೆ. ಈತ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಸದಸ್ಯ ಎನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ವಕೀಲ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.
“ಎಲ್ಲರೂ ವೃತ್ತಿಪರ ಕೊಲೆಗಾರರಂತೆ ಕಂಡುಬಂದಿದ್ದು, ವಾಮನ್ ರಾವ್ ಅವರ ತಂದೆ ಕೃಷ್ಣ ರಾವ್ ಅವರು ಕುಂಟಿ ಶ್ರೀನಿವಾಸ್ ಹಾಗೂ ಇತರರ ವಿರುದ್ದ ದೂರು ದಾಖಲಿಸಿದ ಅರ್ಧಗಂಟೆಯಲ್ಲಿ ಈ ಕೃತ್ಯ ನಡೆದಿದೆ. ನಾವು ಶ್ರೀನಿವಾಸನ 10 ಸಹಚರರನ್ನು ಕಸ್ಟಡಿಗೆ ಪಡೆದಿದ್ದು, 6 ತಂಡಗಳನ್ನು ರಚಿಸಿದ್ದೇವೆ’’ಎಂದು ಪೊಲೀಸ್ ಕಮಿಷನರ್ ವಿ.ಸತ್ಯನಾರಾಯಣ ಹೇಳಿದ್ದಾರೆ.
ತಮ್ಮ ಜೀವಕ್ಕೆ ಅಪಾಯವಿದೆ ಎಂದು ದಂಪತಿಯು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಅಧಿಕೃತ ದೂರು ನೀಡಿತ್ತು. ಈ ದಾಳಿಯು ರಾಜ್ಯದ ವಕೀಲರಿಗೆ ಆಘಾತ ತಂದಿದ್ದು, ಆರೋಪಿಗಳ ಪರ ವಾದಿಸದೆ ಇರಲು ನಿರ್ಧರಿಸಿದ್ದಾರೆ. ಈ ದಂಪತಿಯು ಕೊರೋನ ಕಾಲದಲ್ಲಿ ಬಡವರ ಕಲ್ಯಾಣಕ್ಕೆ ಕೊಡುಗೆ ನೀಡಿ ಜನಾನುರಾಗಿಯಾಗಿತ್ತು.