ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿರುವ ʼಮೆಟ್ರೋಮ್ಯಾನ್ʼ ಇ. ಶ್ರೀಧರನ್
ಹೊಸದಿಲ್ಲಿ: ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಪ್ರಧಾನ ಸಲಹೆಗಾರ ಮತ್ತು ಮೆಟ್ರೊಮ್ಯಾನ್ ಎಂದು ಜನಪ್ರಿಯವಾಗಿರುವ ಇ ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ವಿಧಾನಸಭಾ ಚುನಾವಣೆಗೆ ಮುನ್ನ ಫೆಬ್ರವರಿ 21 ರಂದು ಕಾಸರಗೋಡ್ ನಿಂದ ಸುರೇಂದ್ರನ್ ನೇತೃತ್ವದ ರಾಜ್ಯವ್ಯಾಪಿ ವಿಜಯ ಯಾತ್ರೆ ಉದ್ಘಾಟನೆಯ ಸಂದರ್ಭದಲ್ಲಿ ಶ್ರೀಧರನ್ (88) ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಎರಡೂ ಶ್ರೀಧರನ್ ಅವರನ್ನು ಹಲವಾರು ಸಂದರ್ಭಗಳಲ್ಲಿ ವಿರೋಧಿಸಿ ಅವಮಾನಿಸಿವೆ ಎಂದು ಸುರೇಂದ್ರನ್ ಹೇಳಿದ್ದಾರೆ. ಶ್ರೀಧರನ್ ಅವರು ರಾಜ್ಯಕ್ಕೆ ಒಂದು ಆಸ್ತಿ ಎಂದು ಬಣ್ಣಿಸಿದರು. ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಈಗಾಗಲೇ ಮನವಿ ಮಾಡಿತ್ತು ಎಂದು ಸುರೇಂದ್ರನ್ ಹೇಳಿದ್ದಾರೆ.
ಈ ನಡುವೆ, ಶ್ರೀಧರನ್ ಅವರು ಮಾಧ್ಯಮವೊಂದರ ವಿಭಾಗದೊಂದಿಗೆ ಮಾತನಾಡಿದ್ದು, ಚುನಾವಣೆಯಲ್ಲಿ ಸ್ಫರ್ಧಿಸುವ ವಿಚಾರವನ್ನು ನಾನು ಪಕ್ಷಕ್ಕೆ ಬಿಟ್ಟಿದ್ದೇನೆ. ನಾನು ಕಳೆದ 10 ವರ್ಷಗಳಿಂದ ಕೇರಳದಲ್ಲಿದ್ದೇನೆ. ನನಗೆ ರಾಜ್ಯಕ್ಕಾಗಿ ಏನಾದರೂ ಉತ್ತಮ ಕಾರ್ಯಗಳನ್ನು ಮಾಡಬೇಕೆಂಬ ಆಗ್ರಹವಿದೆ" ಎಂದು ಹೇಳಿಕೆ ನೀಡಿದ್ದಾಗಿ ವರದಿಗಳು ತಿಳಿಸಿವೆ.