ಕೇಂದ್ರ ಸರಕಾರದಿಂದ ಗೋಳ್ವಾಲ್ಕರ್ ಜನ್ಮದಿನಾಚರಣೆ: ಟ್ವಿಟರ್ ನಲ್ಲಿ ಟ್ರೆಂಡ್ ಆದ 'ನಾಝಿ'

Update: 2021-02-19 14:11 GMT

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೋರ್ವರಾದ ಎಂ.ಎಸ್ ಗೋಳ್ವಾಲ್ಕರ್ ಜನ್ಮ ದಿನದ ಕುರಿತಾದಂತೆ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು ಟ್ವೀಟ್ ಮಾಡಿದ್ದು, ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಟ್ಲರ್ ನ ನಾಝಿ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದ ವ್ಯಕ್ತಿಯೋರ್ವರನ್ನು ಹೊಗಳುವುದು ನಾಚಿಗೇಡು ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಂಸ್ಕೃತಿ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ, "ಓರ್ವ ಖ್ಯಾತ ಚಿಂತಕ, ವಿದ್ವಾಂಸ ಹಾಗೂ ಗಮನಾರ್ಹ ನಾಯಕರಾಗಿರುವ ಗೋಳ್ವಾಲ್ಕರ್ ರನ್ನು ಅವರ ಜನ್ಮದಿನಾಚರಣೆಯಂದು ನಾವು ಸ್ಮರಿಸುತ್ತಿದ್ದೇವೆ. ಅವರ ಚಿಂತನೆಗಳು ನಮಗೆ ಸ್ಫೂರ್ತಿಯ ಸೆಲೆಯಾಗಿರುತ್ತದೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿಯನ್ನೂ ಪೋಸ್ಟ್ ನಲ್ಲಿ ಟ್ಯಾಗ್ ಮಾಡಲಾಗಿದೆ.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪತ್ರಕರ್ತೆ ಅಂಜುಕ್ತಾ ಬಸು, "ಗೋಳ್ವಾಲ್ಕರ್ ನ ಚಿಂತನೆಗಳು ದ್ವೇಷ ಮತ್ತು ಕ್ರೂರತೆಗೆ ಸ್ಫೂರ್ತಿಯಾಗಿರುತ್ತದೆ. ಇದು ಎಲ್ಲಾ ತಡೆಗಳನ್ನೂ ದಾಟಿದೆ. ಗೋಳ್ವಾಲ್ಕರ್ ಓರ್ವ ನಾಝಿ. ಜರ್ಮನಿಯಲ್ಲಿ ಯಹೂದಿಗಳು ಯಾವ ರೀತಿಯ ಕ್ರೂರತೆಯನ್ನು ಅನುಭವಿಸಿದ್ದಾರೆಯೋ, ಅದನ್ನೇ ಭಾರತದಲ್ಲಿ ಮುಸ್ಲಿಮರಿಗೆ ಮಾಡಬೇಕೆಂದು ಕರೆ ಕೊಟ್ಟಿದ್ದ ವ್ಯಕ್ತಿ. ಸರಕಾರವು ಆರೆಸ್ಸೆಸ್ ನ ಅಜೆಂಡಾವನ್ನು ಅಧಿಕೃತವಾಗಿ ಜಾರಿಗೆ ತರುತ್ತಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. 

"ಭಾರತೀಯರೇ.. ಬ್ರಿಟಿಷರೊಂದಿಗೆ ಹೋರಾಡಿ ನಿಮ್ಮ ಶಕ್ತಿಯನ್ನು ವ್ಯರ್ಥಗೊಳಿಸಬೇಡಿ. ಮೊದಲು ನಮ್ಮೊಳಗಿನ ವೈರಿಗಳಾಗಿರುವ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯೂನಿಸ್ಟರೊಂದಿಗೆ ಹೋರಾಡಿ" ಎಂಬ ದ್ವೇಷಪೂರಿತ ಹೇಳಿಕೆಗಳನ್ನು ಉಲ್ಲೇಖಿಸಿ ಹಲವಾರು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. "ಗೋಳ್ವಾಲ್ಕರ್ ಯಾವತ್ತೂ ಭಾರತೀಯ ತ್ರಿವರ್ಣ ಧ್ವಜವನ್ನು ಬೆಂಬಲಿಸಿರಲಿಲ್ಲ. ಆತ ಒಂದೇ ಬಣ್ಣದ ಧ್ವಜವನ್ನು ಬಯಸಿದ್ದು, ತ್ರಿವರ್ಣ ಧ್ವಜವು ದೇಶಕ್ಕೆ ಹಾನಿಕಾರಕ ಮತ್ತು ದೇಶವಾಸಿಗಳ ಮಾನಸಿಕ ನೆಮ್ಮದಿಯನ್ನು ಇಲ್ಲವಾಗಿಸುತ್ತದೆ" ಎಂದು ಗೋಳ್ವಲ್ಕರ್ ಹೇಳಿದ್ದನ್ನು ಹಲವು ಬಳಕೆದಾರರು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News