ಗಲ್ವಾನ್ ನಲ್ಲಿ ಭಾರತೀಯ ಯೋಧರೊಂದಿಗೆ ನಡೆಸಿದ್ದ ಘರ್ಷಣೆಯ ವೀಡಿಯೊ ಬಿಡುಗಡೆ ಮಾಡಿದ ಚೀನಾ

Update: 2021-02-19 17:28 GMT

ಹೊಸದಿಲ್ಲಿ: ಕಳೆದ ವರ್ಷ ಜೂನ್ ನಲ್ಲಿ ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಡಝನ್ ಗಟ್ಟಳೆ ಭಾರತೀಯ ಹಾಗೂ ಚೀನಾ ಸೈನಿಕರು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದ ವೀಡಿಯೊವೊಂದನ್ನು ಚೀನಾದ ಸರಕಾರಿ ಮಾಧ್ಯಮವೊಂದು ಬಿಡುಗಡೆ ಮಾಡಿದೆ.

ಭಾರತದೊಂದಿಗೆ ತನ್ನ ಸೈನಿಕರು ನಡೆಸಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ವರು ಅಧಿಕಾರಿಗಳು ಹಾಗೂ ಸೈನಿಕರು ಮೃತಪಟ್ಟಿದ್ದಾರೆಂದು ಚೀನಾ ಕೊನೆಗೂ ಅಧಿಕೃತವಾಗಿ ಒಪ್ಪಿಕೊಂಡ ಬಳಿಕ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಗಲ್ವಾನ್ ಘರ್ಷಣೆಯಲ್ಲಿ ಚೀನಾದ 30 ಯೋಧರು ಮೃತಪಟ್ಟಿದ್ದರು ಎಂದು ಭಾರತ ನಂಬಿದೆ. ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.

ಭಾರತೀಯ ಸೈನಿಕರು “ಚೀನಾ ಕಡೆಯಿಂದ ಅತಿಕ್ರಮಣ ಮಾಡಿದ್ದಾರೆ’’ ಎಂದು ಚೀನಾದ ಸರಕಾರಿ ಮಾಧ್ಯಮ ವಿಶ್ಲೇಷಕ ಶೆನ್ ಶಿವೇ ಟ್ವೀಟಿಸಿದ್ದಾರೆ.  ಚೀನಾದ ಸರಕಾರಿ ಮಾಧ್ಯಮ ವೀಡಿಯೊದಲ್ಲಿ  ಎರಡೂ ಕಡೆಯ ಸೈನಿಕರು ಗುಂಪಾಗಿ ನದಿಯನ್ನು ದಾಟುತ್ತಿರುತ್ತಾರೆ. ಅಲ್ಲಿ ಅವರು ಒಬ್ಬರಿಗೊಬ್ಬರು ತಳ್ಳಾಟದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ರಾತ್ರಿಯಾಗುತ್ತಿದ್ದಂತೆ ಎರಡೂ ಕಡೆಯ ಸೈನಿಕರು ಬಂಡೆಯ ಅಂಚಿನಲ್ಲಿ ಬ್ಯಾಟರಿ ಹಾಗೂ ಬ್ಯಾಟನ್ ನೊಂದಿಗೆ ನಿಂತಿರುವುದು ಕಾಣುತ್ತದೆ. ಕತ್ತಲೆಯಲ್ಲಿ ಜೋರಾಗಿ ಕೂಗುತ್ತಿರುವುದು ವೀಡಿಯೊದಲ್ಲಿ ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News