ಆಸ್ಟೇಲಿಯನ್ ಓಪನ್: ಮೆಡ್ವೆಡೆವ್ ಫೆನಲ್‌ಗೆ

Update: 2021-02-20 04:30 GMT

ಮೆಲ್ಬೋರ್ನ್: ಸ್ಟೆಫನೊಸ್ ಸಿಟ್ಸಿಪಾಸ್‌ರನ್ನು ಮಣಿಸಿದ ರಶ್ಯದ ಡೇನಿಯಲ್ ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮೆಡ್ವೆಡೆವ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸವಾಲನ್ನು ಎದುರಿಸಲಿದ್ದಾರೆ. ಜೊಕೊವಿಕ್ ಅಭೂತಪೂರ್ವ 9ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್ ನ ಎರಡನೇ ಸೆಮಿ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಮೆಡ್ವೆಡೆವ್ ಗ್ರೀಸ್‌ನ ಸಿಟ್ಸಿಪಾಸ್ ಅವರನ್ನು ರಾಡ್ ಲಾವೆರ್ ಅರೆನಾದಲ್ಲಿ ನೆರೆದಿದ್ದ 7,000ಕ್ಕೂ ಅಧಿಕ ಟೆನಿಸ್ ಅಭಿಮಾನಿಗಳ ಸಮ್ಮುಖದಲ್ಲಿ 6-4, 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.

ಅಜೇಯ ಗೆಲುವಿನ ಓಟದೊಂದಿಗೆ ಮೂರು ಪ್ರಶಸ್ತಿಗಳನ್ನು ಬಗಲಿಗೇರಿಸಿ ಕೊಂಡಿರುವ 25ರ ವಯಸ್ಸಿನ ಮೆಡ್ವೆಡೆವ್ ಕಳೆದ ಕೆಲವು ಸಮಯದಿಂದ ಗ್ರಾನ್‌ಸ್ಲಾಮ್‌ನಲ್ಲಿ ಯಶಸ್ಸು ಸಾಧಿಸಲು ಯತ್ನಿಸುತ್ತಿದ್ದಾರೆ. ಮೆಡ್ವೆಡೆವ್ ಇನ್ನಷ್ಟೇ ಗ್ರಾನ್‌ಸ್ಲಾಮ್ ಟ್ರೋಫಿ ಗೆಲ್ಲಬೇಕಾಗಿದೆ.

 ಆದರೆ, ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಮಡ್ವೆಡೆವ್‌ಗೆ ಕಠಿಣ ಸವಾಲು ಎದುರಾಗಿದೆ. ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆಡಿರುವ ಎಲ್ಲ 8 ಫೈನಲ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಜೊಕೊವಿಕ್ 9ನೇ ಪ್ರಶಸ್ತಿ ಜಯಿಸಲು ಸಜ್ಜಾಗಿದ್ದಾರೆ. ಈ ಟೂರ್ನಮೆಂಟ್ ಮೆಡ್ವೆಡೆವ್ ಪಾಲಿಗೆ ಸ್ಮರಣೀಯವಾಗಿದೆ. ನವೆಂಬರ್ ತಿಂಗಳಿನಿಂದ ತನ್ನ ಎದುರಾಳಿಗಳಿಗೆ ಬೆವರಿಳಿಸುತ್ತಾ ಬಂದಿರುವ ಇವರು 17 ಬಾರಿಯ ಚಾಂಪಿಯನ್ ಜೊಕೊವಿಕ್ ವಿರುದ್ಧ ಆಡಿರುವ ಕಳೆದ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದ್ದಾರೆ.

‘‘ಫೈನಲ್ ತಲುಪಿರುವುದು ಖಂಡಿತವಾಗಿಯೂ ಸುಲಭದ ತುತ್ತಾಗಿರಲಿಲ್ಲ. ನಾನು ಅಲ್ಪಸ್ವಲ್ಪ ಹೆದರಿದ್ದೆ. ಏಕೆಂದರೆ ಇದು ಗ್ರಾನ್‌ಸ್ಲಾಮ್‌ನ ಸೆಮಿ ಫೈನಲ್... ಪಂದ್ಯ ಗೆಲ್ಲಲು ಸಮರ್ಥವಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ’’ ಎಂದು ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ ರಶ್ಯದ ಮೂರನೇ ಟೆನಿಸ್ ತಾರೆಯಾಗಿರುವ ಮೆಡ್ವೆಡೆವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News