ಎಲ್ಲೋ ಒಂದು ಕಡೆ ಒಳ್ಳೆಯದಾಗಿಯೇ ಇರುತ್ತೆ.....!

Update: 2021-02-20 18:32 GMT

ಪರಮ ಭಕ್ತನಾಗಿರುವ ‘ಬಸ್ಯಾ’ ಮನೆಯ ಹೊರಗಡೆ ನಿಂತಿರುವುದನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ಕುತೂಹಲದಿಂದ ಅತ್ತ ನಡೆದ.
 
‘‘ಸಾರ್, ಟಿವಿಯಲ್ಲಿ ಮೋದಿಯವರ ಭಾಷಣ ಬರ್ತಾ ಇದೆ...ನೀವೇನು ಸಾರ್ ಹೊರಗೆ....’’ ಬಸ್ಯಾ ಪೇಲವ ಮುಖ ಮಾಡಿಕೊಂಡು ಹೇಳಿದ ‘‘ಗಲಾಟೆ ಆಯ್ತು ... ಕಮಲಾ ನನ್ನ ಹೊರ ಹಾಕಿ ಚಿಲಕ ಹಾಕಿಕೊಂಡಿದ್ದಾಳೆ....’’
‘‘ಯಾಕ್ ಸಾರ್...ಏನಾಯ್ತು?’’
‘‘ಏನಾಯ್ತು ಅಂದ್ರೆ...ನನಗೆ ಬಯ್ದಳು...ಸುಮ್ಮನಿದ್ದೆ.... ನನ್ನ ಅಪ್ಪಂಗೆ ಬಯ್ದಳು ಸುಮ್ಮನಿದ್ದೆ...ಪಕ್ಷಕ್ಕೆ ಬಯ್ದಳು ಸುಮ್ಮನಿದ್ದೆ....ಕೊನೆಗೆ ನನ್ನ ದೇವ್ರಿಗೆ ಬಯ್ದಳು....ಸುಮ್ಮನಿರಕ್ಕಾಗತ್ತ?’’ ಬಸ್ಯಾ ಗಳಗಳನೆ ಅಳತೊಡಗಿದ.

‘‘ಯಾವ ದೇವ್ರ ಸಾರ್? ತಿರುಪತಿ ದೇವ್ರ? ಅಕ್ಕೋರು ದೇವರಿಗ್ಯಾಕೆ ಬೈಯಕ್ಕೋದ್ರು...’’ ಕಾಸಿ ಆತಂಕದಿಂದ ಕೇಳಿದ.
‘‘ಅದೇ ಸಿಲಿಂಡರ್, ಪೆಟ್ರೋಲ್ ದರ ಜಾಸ್ತಿಯಾಯ್ತಲ್ಲ....ಅದಕ್ಕೆ....’’ ಎಂದು ಮತ್ತೆ ಮುಸು ಮುಸು ಅಳತೊಡಗಿದ.

ಯಾವ ದೇವರು ಎನ್ನುವುದು ಕಾಸಿಗೆ ಈಗ ಅರ್ಥವಾಗಿ ಹೋಯಿತು. ‘‘ಆದ್ರೂ ಪೆಟ್ರೋಲ್ ದರ ಜಾಸ್ತಿಯಾಗಿರುವುದು ಸರಿಯಲ್ಲ ಕಣ್ರೀ.....’’ ಕಾಸಿ ರಾಗ ಎಳೆದ.
‘‘ನೀವು ಕೂಡ...?’’ ಯೂ ಟೂ ಬ್ರೂಟಸ್ ಎಂಬಂತೆ ಕಾಸಿಯನ್ನು ಬಸ್ಯ ನೋಡಿದ.
‘‘ಹಾಗಲ್ಲ ಪೆಟ್ರೋಲ್ ಬೆಲೆಯೇರಿಕೆಯಿಂದ ಎಲ್ಲರಿಗೂ ತೊಂದರೆ ಅಲ್ಲವೇ?’’ ಕಾಸಿ ಸಮಾಧಾನ ಪಡಿಸಿದ.
‘‘ನೋಡ್ರಿ...ಮೋದಿಯವರು ಏನೇ ಮಾಡಿದರೂ ದೇಶದ ಒಳಿತಿಗೇ ಮಾಡ್ತಾರೆ. ನಂಬಿ ಸಾರ್....’’ ಬಸ್ಯ ಒತ್ತಾಯ ಪಡಿಸಿದ.
‘‘ಎಲ್ಲಿ ಒಳ್ಳೆಯದಾಗಿದೆ ಹೇಳಿ...?’’ ಕಾಸಿ ಮತ್ತೆ ಪ್ರಶ್ನಿಸಿದ.
‘‘ಎಲ್ಲೋ ಒಂದು ಕಡೆ ಒಳ್ಳೆಯದಾಗಿಯೇ ಇರತ್ತೆ. ಸುಮ್ಮನೆ ಯಾರಾದರೂ ಬೆಲೆ ಜಾಸ್ತಿ ಮಾಡ್ತಾರಾ? ಹಿಂದಿನ ಪ್ರಧಾನಿಯ ಹಾಗೆ ಅವರಿಗೆ ಹೆಂಡ್ತಿ ಮಕ್ಕಳು ಇಲ್ಲ. ಕುಟುಂಬ ಇಲ್ಲ. ಅವರ ತಾಯಿಯ ಮನೆ ನೋಡಿದಿರಾ ನೀವು....?’’ ಭಕ್ತ ಬಸ್ಯಾ ಮತ್ತೆ ಬುಳ ಬುಳನೇ ಅಳ ತೊಡಗಿದ.
‘‘ಅದಿರಲಿ, ಅಕ್ಕೋರು ಯಾಕೆ ನಿಮ್ಮನ್ನು ಹೊರಗೆ ಹಾಕಿದರು...’’ ಕಾಸಿ ವಿಷಯಕ್ಕೆ ಬಂದ.
‘‘ಗ್ಯಾಸ್ ಮುಗಿದಿದೆ. ತರೋಕೆ ದುಡ್ಡಿಲ್ಲ’’

‘‘ಅದೇನೋ ಒಂದು ಕಮೆಂಟಿಗೆ ಎರಡು ರೂಪಾಯಿ ಕೊಡ್ತಾರೆ ಎನ್ನೋ ಮಾಹಿತಿ ಇದೆಯಲ್ಲ...’’ ಕಾಸಿ ಕೇಳಿದ.
‘‘ಹೂಂ...ಅಂದಿದ್ರು...ಹೆಂಡ್ತಿ ಕಿವಿ ಓಲೆ ಮಾರಿ ಬಂದ ದುಡ್ಡಲ್ಲಿ ಮೊಬೈಲ್ ತೆಗ್ದು ಕರೆನ್ಸಿ ಹಾಕಿ ಕಮೆಂಟ್ ಮಾಡ್ತಾ ಇದ್ದೆ. ದುಡ್ಡು ಬರಲಿಲ್ಲ ಎಂದು ಹೇಳಿದ್ರೆ, ನೋಡ್ರಿ..ಬ್ಯಾಂಕಿಗೆ ಹಾಕ್ತಾ ಇದ್ದೇವೆ ಅಂದ್ರು. ಒಂದು ದಿನ ಫೋನ್ ಬಂತು....‘ಬಸ್ಯಾ ಅವರೇ ನಿಮ್ಮ ಕಮೆಂಟ್‌ಗೆ ಎರಡು ರೂಪಾಯಿ ಒಟ್ಟು ಸೇರಿ ನಾಲ್ಕು ಸಾವಿರ ರೂಪಾಯಿ ಆಗಿದೆ. ಅದರಲ್ಲಿ ಜಿಎಸ್‌ಟಿ ಕಳೆದು ಮೂರೂವರೆ ಸಾವಿರ ರೂಪಾಯಿ ನಿಮಗೆ ಸಿಗುತ್ತೆ. ಅದರಲ್ಲಿ ಒಂದು ಸಾವಿರ ರೂಪಾಯಿ ರಾಮಮಂದಿರಕ್ಕೆ ಕತ್ತರಿಸಿಕೊಂಡಿದ್ದೇವೆ. ಇನ್ನು ಎರಡೂವರೆ ಸಾವಿರ ರೂಪಾಯಿ ನಿಮ್ಮದು. ಅದರಲ್ಲಿ ಇನ್ನು ಒಂದು ಸಾವಿರ ರೂಪಾಯಿ ಕಾಶ್ಮೀರದಲ್ಲಿ ಕಾವಲು ಕಾಯುತ್ತಿರುವ ಸೈನಿಕರ ಹೆಸರಲ್ಲಿ ಕತ್ತರಿಸಿಕೊಂಡಿದ್ದೇವೆ. ಒಂದೂವರೆ ಸಾವಿರ ರೂಪಾಯಿ ಉಳಿದಿದೆ. ಅದನ್ನು ಚೀನಾದ ವಿರುದ್ಧ ಹೋರಾಡಲು ಕತ್ತರಿಸಿಕೊಂಡಿದ್ದೇವೆ. ಇನ್ನು, ಸಂಸತ್ ಭವನ ಕಟ್ಟಡ ಕಟ್ಟಲು, ಶಿವಾಜಿ ಪಾರ್ಕ್ ಮಾಡಲು ನಿಮ್ಮಿಂದ ದುಡ್ಡು ಬರಬೇಕಾಗಿದೆ. ನಮ್ಮ ಬ್ಯಾಂಕ್ ಅಕೌಂಟ್ ವಿವರ ಕಳುಹಿಸಿದ್ದೇವೆ. ಶೀಘ್ರ ಅದರಲ್ಲಿ ಹಾಕಿ ಬಿಡಿ’ ಎಂದರು....’’

‘‘ಪೆಟ್ರೋಲ್ ಬೆಲೆ ಬಗ್ಗೆ ಅವರಲ್ಲಿ ಕೇಳ್ಬೇಕಾಗಿತ್ತು...’’ ‘‘ಕೇಳಿದೆ ಸರ್...ಅವರು ಹೇಳಿದರು....ದೇಶಾದ್ಯಂತ ರೈತರ ವೇಷದಲ್ಲಿ ಉಗ್ರಗಾಮಿಗಳು ಬೀದಿಗಿಳಿದಿದ್ದಾರೆ. ಅವರ ಟ್ರಾಕ್ಟರ್‌ಗೆ ಡೀಸೆಲ್ ಸಿಗಬಾರದು. ಹಾಗೆಯೇ ಅವರು ಪೆಟ್ರೋಲ್ ಸುರಿಸಿ ಬೆಂಕಿ ಹಚ್ಚಬಾರದು ಎಂದು ಬೆಲೆಯೇರಿಕೆ ಮಾಡಿದ್ದಾರಂತೆ...ಪೆಟ್ರೋಲ್ ಬೆಲೆ ಇಳಿಕೆಯಾಗಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತಂತೆ...ನೋಡ್ರೀ ಮೋದಿ ತಲೆ ಹೆಂಗೆ ಕೆಲಸ ಮಾಡಿದೆ...’’
‘‘ತರಕಾರಿ ಬೆಲೇನೂ ಜಾಸ್ತಿ ಆಗಿದೆಯಲ್ಲ...?’’ ಕಾಸಿ ಕೇಳಿದ.

‘‘ಅದರಿಂದ ಬೆಳೆ ಬೆಳೆದ ರೈತರಿಗೆ ಲಾಭವಾಗಿದೆ. ಆದರೂ ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಸರಿಯೇ?’’
‘‘ಅದಿರ್ಲಿ....ಅಕ್ಕೋರ್ ಯಾಕೆ ಹೊರಗೆ ಹಾಕಿದ್ರು...’’

‘‘ಆಕೆ ದೇಶದ್ರೋಹಿ. ನನ್ನ ದೇಶಭಕ್ತಿ ಪ್ರದರ್ಶನ ಮಾಡಿದ್ದಕ್ಕೆ ಹೊರಗೆ ಹಾಕಿದ್ಲು’’ ಬಸ್ಯಾ ಮತ್ತೆ ಬುಸ ಬುಸ ಅಳತೊಡಗಿದ. ‘‘ಸರಿ ನೀವೇನು ಮಾಡಿದ್ರಿ ಅದನ್ನು ಹೇಳಿ....’’
‘‘ಸಿಲಿಂಡರ್ ತರಲು ದುಡ್ಡು ಕೊಟ್ಟಿದ್ರು. ಆ ದುಡ್ಡನ್ನು ನಾನು ಇಂಟರ್‌ನೆಟ್ ರೀಚಾರ್ಜ್ ಮಾಡಿಸ್ಕೊಂಡೆ....ಇದು ತಪ್ಪಾ....’’
‘‘ಅಷ್ಟು ಅರ್ಜೆಂಟೇನಿತ್ತು?’’ ಕಾಸಿ ಕೇಳಿದ.
‘‘ದೇಶದಲ್ಲಿ ಉಗ್ರಗಾಮಿಗಳ ಕಾಟ ಜೋರಾಗಿದೆ. ಮೋದಿಯೊಂದಿಗೆ ಕೈ ಜೋಡಿಸ್ಬೇಕಲ್ಲ....ಅದಕ್ಕೆ......’’
‘‘ಮತ್ತೆ ಬೇಯಿಸೋಕ್ಕೆ ಏನು ಮಾಡ್ತೀರಿ....?’’ ಕಾಸಿ ಆತಂಕದಿಂದ ಕೇಳಿದ.
‘‘ಮೋದಿಯೋರು ಎಷ್ಟೆಲ್ಲ ತ್ಯಾಗ ಮಾಡಿದ್ದಾರೆ...ನಾವು ಇಷ್ಟೂನೂ ತ್ಯಾಗ ಮಾಡಕ್ಕಾಗಲ್ವಾ?’’
‘‘ಅದಿರ್ಲಿ....ಹೆಂಡ್ತಿ ಬಾಗಿಲು ತೆಗೆಯದೇ ಇದ್ದರೆ ಏನು ಮಾಡ್ತೀರಿ?’’
‘‘ಮೋದಿ ತರ ಹೆಂಡ್ತಿ ಬಿಟ್ಟು ಹಿಮಾಲಯಕ್ಕೆ ಹೋಗ್ತೀನಿ....’’
ಅಷ್ಟರಲ್ಲಿ ಒಳಗಿನಿಂದ ಬಸ್ಯಾ ಹೆಂಡ್ತಿ ಮಾತು ಬಾಣದಂತೆ ತೂರಿಬಂತು ‘‘ಮನೆಯೊಳಗೆ ಕಾಲಿಟ್ಟೇ ಅಂದ್ರೆ ನಿನ್ನನ್ನೇ ಒಲೆಗೆ ಹಾಕಿ ಅನ್ನ ಬೇಯಿಸ್ತೀನಿ. ಬಡ್ಡೆತ್ತದೆ....ಹೆಂಡ್ತಿ ಬಿಟ್ಟೋನ ಮಾತು ಕೇಳ್ಕೊಂಡು, ಹೆಂಡ್ತಿ ಮಕ್ಕಳನ್ನು ಉಪವಾಸ ಹಾಕೋಕೆ ಹೊರಟವನೆ....ಸೆಗಣಿ...ಸೆಗಣಿ ತಿನ್ನಿಸ್ತೀನಿ ನಿನಗೆ ರಾತ್ರಿ....ಬಾ ಒಳಗೆ...’’
ಇಲ್ಲಿ ನಿಂತರೆ ತಾನೂ ಸೆಗಣಿ ತಿನ್ನಬೇಕಾದೀತು ಎಂದು ಕಾಸಿ ಮೆಲ್ಲಗೆ ಕಾಲ್ಕಿತ್ತ.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News