ಭಾರತದ ರೈತರ ಪ್ರತಿಭಟನೆಯ ಪರ ಧ್ವನಿಯೆತ್ತಿದ ಅಮೆರಿಕದ ರೈತ ಸಂಘಟನೆಗಳು

Update: 2021-02-21 18:33 GMT

 ಹೊಸದಿಲ್ಲಿ,ಫೆ.21: ಅಮೆರಿಕದ ರೈತರಿಗೆ ಸರಿಪಡಿಸಲಾಗದಷ್ಟು ಹಾನಿಗೆ ಕಾರಣವಾಗಿದ್ದ ರೇಗನ್ ಆಡಳಿತದ ಖಂಡನೀಯ ನಿದರ್ಶನಗಳನ್ನು ಉಲ್ಲೇಖಿಸಿರುವ ಆ ರಾಷ್ಟ್ರದ 87 ರೈತ ಒಕ್ಕೂಟಗಳು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತಿಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

 
 ತೀಕ್ಷ್ಣ ಪತ್ರವೊಂದರಲ್ಲಿ ಈ ಒಕ್ಕೂಟಗಳು ಭಾರತ ಮತ್ತು ಅಮೆರಿಕದಲ್ಲಿ ನವ ಉದಾರೀಕರಣದ ಶಕ್ತಿಗಳು ಕೃಷಿಯ ಮೇಲೆ ಬೀರಿರುವ ದುಷ್ಪರಿಣಾಮಗಳ ನಡುವಿನ ನಿಕಟ ಸಾಮ್ಯತೆಗಳನ್ನು ಬೆಟ್ಟು ಮಾಡಿವೆ. ‘ಕೃಷಿಯು ನಿಧಾನ ವಿಷವಾಗಿ ಪರಿಣಮಿಸಿದೆ,ಇಲ್ಲಿ ಹೋರಾಟ ಮಾಡುತ್ತಲೇ ಸಾಯುವುದೇ ಒಳ್ಳೆಯದು ’ಎಂಬ ಘಾಝಿಪುರದಲ್ಲಿ ಪ್ರತಿಭಟನಾನಿರತ ರೈತ ರಿಂಘು ಯಶಪಾಲ್ ಅವರ ಹೇಳಿಕೆಯ ಉಲ್ಲೇಖದೊಡನೆ ಅಮೆರಿಕದ ಕಾರ್ಮಿಕ ಒಕ್ಕೂಟಗಳ ಪತ್ರವು ಆರಂಭಗೊಂಡಿದೆ. ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇತಿಹಾಸದಲ್ಲಿಯ ಅತ್ಯಂತ ಪ್ರಬಲ ಪ್ರತಿಭಟನೆಗಳಲ್ಲೊಂದಾಗಿದೆ ಎಂದು ಈ ಒಕ್ಕೂಟಗಳು ಬಣ್ಣಿಸಿವೆ.

 ಈಗ ಕೆಲವೇ ಬೆಳೆಗಳಿಗೆ ದೊರೆಯುತ್ತಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಎಲ್ಲ ಬೆಳೆಗಳಿಗೆ ವಿಸ್ತರಿಸಬೇಕು ಎನ್ನುವುದು ಪ್ರತಿಭಟನಾನಿರತ ರೈತರ ಪ್ರಮುಖ ಬೇಡಿಕೆಯಾಗಿದೆ ಎಂದು ಬೆಟ್ಟು ಮಾಡಿರುವ ಪತ್ರವು,ಅದು ಇತರ ವ್ಯಾಪಾರಿಗಳಿಗೆ ಮುಖ್ಯ ಬೆಲೆ ಸಂಕೇತವಾಗಿದೆ ಮತ್ತು ರೈತರು ತಮ್ಮ ಬೆಳೆಗಳಿಗೆ ನ್ಯಾಯೋಚಿತ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಪ್ರಶಂಸಿಸಿದೆ. ಪ್ರಚಲಿತ ಬಿಕ್ಕಟ್ಟಿನ ಸೃಷ್ಟಿಯಲ್ಲಿ ಅಮೆರಿಕ ಸರಕಾರದ ಪಾತ್ರವಿದೆ ಎನ್ನುವುದನ್ನು ಪತ್ರದಲ್ಲಿ ಈ ರೈತ ಒಕ್ಕೂಟಗಳು ಬೆಟ್ಟು ಮಾಡಿರುವುದು ಗಮನಾರ್ಹವಾಗಿದೆ.

 ವಿಶ್ವ ವಾಣಿಜ್ಯ ಸಂಘಟನೆ (ಡಬ್ಲುಟಿಒ)ಯಲ್ಲಿ ಅಮೆರಿಕವು ಭಾರತದಿಂದ ಎಂಎಸ್ಪಿಯ ಸೀಮಿತ ಬಳಕೆಗೆ ಮುಖ್ಯ ವಿರೋಧಿಯಾಗಿದೆ. ಭಾರತದ ಎಂಎಸ್ಪಿ ವ್ಯಾಪಾರವನ್ನು ತಿರುಚುತ್ತಿದೆ ಎಂದು ಆಸ್ಟ್ರೇಲಿಯಾ,ಕೆನಡಾ ಮತ್ತು ಐರೋಪ್ಯ ಮಿತ್ರರಾಷ್ಟಗಳೊಂದಿಗೆ ಅಮೆರಿಕವು ಪ್ರತಿಪಾದಿಸುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
 ಕೃಷಿ ನೀತಿಗಳು ರೈತರಿಗೆ ಪೂರಕವಾಗಿ ಮಾಡುವಂತೆ ಬೈಡೆನ್ ಆಡಳಿತವನ್ನೂ ರೈತ ಒಕ್ಕೂಟಗಳು ಆಗ್ರಹಿಸಿವೆ.

 ಭಾರತದಲ್ಲಿಯ ಪ್ರಚಲಿತ ಕೃಷಿ ಬಿಕ್ಕಟ್ಟು ಹೆಚ್ಚುಕಡಿಮೆ ನಾಲ್ಕು ದಶಕಗಳ ಹಿಂದೆ ಅಮೆರಿಕದಲ್ಲಿಯೂ ಉಂಟಾಗಿತ್ತು ಎಂದು ಹೇಳಿರುವ ಒಕ್ಕೂಟಗಳು,ರೇಗನ್ ಸರಕಾರವು ಬೆಲೆಗಳಲ್ಲಿಯ ಸಾಮ್ಯತೆಯನ್ನು ತಗ್ಗಿಸುವ ಜೊತೆಗೆ ಇತರ ನಿಯಂತ್ರಣ ಮುಕ್ತ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೊಂದಿಗೆ ಉದ್ದೇಶಪೂರ್ವಕ ನೀತಿ ಬದಲಾವಣೆಗಳ ಮೂಲಕ ಕೃಷಿಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವಂತೆ ಮಾಡಿತ್ತು ಎಂದು ನೆನಪಿಸಿವೆ.
ಸ್ವಂತಂತ್ರ ರೈತರನ್ನು ಮತ್ತು ಸ್ಥಳೀಯ ಆಹಾರ ವ್ಯವಸ್ಥೆಗಳನ್ನು ಬೆಂಬಲಿಸುವಂತೆ ಅವು ಅಮೆರಿಕ ಮತ್ತು ಭಾರತ ಸರಕಾರಗಳನ್ನು ಆಗ್ರಹಿಸಿವೆ.

 ಸಂಯುಕ್ತ ಕಿಸಾನ ಮೋರ್ಚಾದ ರೈತರು ಮತ್ತು ಕೃಷಿ ಕಾರ್ಮಿಕರು ಸಂಘಟಿಸಿರುವ ಏಕೀಕೃತ ಹೋರಾಟಗಳನ್ನು ನಾವು ಬಹುವಾಗಿ ಗೌರವಿಸುತ್ತೇವೆ ಮತ್ತು ನಾವು ಅವರೊಂದಿಗಿದ್ದೇವೆ ಎಂದು ಅಮೆರಿಕದ ರೈತ ಒಕ್ಕೂಟಗಳು ಪ್ರಕಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News