ಪತ್ರಕರ್ತನ ವಿರುದ್ಧ ಎಫ್ಐಆರ್ ದಾಖಲು: ಕಾಶ್ಮೀರ ಪ್ರೆಸ್ ಕ್ಲಬ್ ಕಳವಳ

Update: 2021-02-21 17:06 GMT

ಜಮ್ಮುಕಾಶ್ಮೀರ, ಫೆ. 21: ಕಾಶ್ಮೀರದ ಪತ್ರಕರ್ತ ಸಾಜದ್ ಗುಲ್ ಅವರ ವಿರುದ್ಧ ದಾಖಲಿಸಲಾದ ಪ್ರಕರಣ ಕುರಿತಂತೆ ಕಾಶ್ಮೀರ ಪ್ರೆಸ್ ಕ್ಲಬ್ ರವಿವಾರ ಕಳವಳ ವ್ಯಕ್ತಪಡಿಸಿದೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿರುವ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಕುರಿತು ಲೇಖನ ಬರೆದಿರುವುದಕ್ಕೆ ಅಧಿಕಾರಿಗಳು ಪತ್ರಕರ್ತ ಸಾಜದ್ ಗುಲ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ‘ದಿ ಕಾಶ್ಮೀರ ವಾಲ್ಲ’ ಪತ್ರಿಕೆಯಲ್ಲಿ ಫೆಬ್ರವರಿ 9ರಂದು ಲೇಖನ ಬರೆದಿರುವುದಕ್ಕಾಗಿ ಉತ್ತರ ಕಾಶ್ಮೀರ ಮೂಲದ ವರದಿಗಾರ ಗುಲ್ ವಿರುದ್ಧ ಗಲಭೆ, ಅತಿಕ್ರಮಣ, ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವೆಬ್ಸೈಟ್ ಹೇಳಿದೆ. 

ಈ ಪ್ರದೇಶದಲ್ಲಿ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಕುರಿತಂತೆ ತಹಶೀಲ್ದಾರ್ ಹಾಜಿನ್ ಮುಹಮ್ಮದ್ ಭಟ್ ಅವರಿಂದ ಬೆದರಿಕೆ ಹಾಗೂ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಬಂಡಿಪೋರಾ ಗ್ರಾಮದ ನಿವಾಸಿಗಳು ನೀಡಿರುವ ಹೇಳಿಕೆ ಲೇಖನದಲ್ಲಿ ಇತ್ತು. ಲೇಖನ ಪ್ರಕಟವಾದ ಬಳಿಕ ತಹಶೀಲ್ದಾರ್ ಅವರು ಗುಲ್ ವಿರುದ್ಧ ಬಂಡಿಪೋರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಗುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಹಲವು ಬಾರಿ ಮನವಿ ಮಾಡಿದ ಹೊರತಾಗಿಯೂ ಪೊಲೀಸರು ಪ್ರಥಮ ಮಾಹಿತಿ ವರದಿ ಪ್ರತಿ ನೀಡಿಲ್ಲ ಎಂದು ಗುಲ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗುಲ್ ಅವರು ಕಾಶ್ಮೀರ ಪ್ರೆಸ್ ಕ್ಲಬ್ಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಗುಲ್, ತಾನು ವರದಿಗೆ ಬದ್ಧನಾಗಿದ್ದೇನೆ. ಆದರೆ, ಸಂಬಂಧಿತ ತಹಾಶೀಲ್ದಾರರು ಪೊಲೀಸರ ಮೂಲಕ ತನ್ನನ್ನು ಕಲ್ಲು ತೂರಾಟ ಆರೋಪದ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘‘ಫೆಬ್ರವರಿ 10ರಂದು ನಡೆದ ಕಟ್ಟಡ ಧ್ವಂಸ ಕಾರ್ಯಾಚರಣೆ ಸಂದರ್ಭ ಘೋಷಣೆ ಕೂಗಿದ ಹಾಗೂ ಕಲ್ಲು ತೂರಾಟ ನಡೆಸಿದ ಆಧಾರ ರಹಿತ ಆರೋಪಗಳನ್ನು ಹೊರಿಸುವ ಮೂಲಕ ತಹಶೀಲ್ದಾರ್ ಹಾಜಿನ್ ಮುಹಮ್ಮದ್ ಭಟ್ ಕಳೆದ ಎರಡು ವಾರಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ’’ ಎಂದು ಗುಲ್ ಅವರು ಕಾಶ್ಮೀರ್ ಪ್ರೆಸ್ ಕ್ಲಬ್ ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News