ನಾಲ್ಕು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ

Update: 2021-02-22 05:34 GMT

ಹೊಸದಿಲ್ಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಮುಖಿಯಾಗುತ್ತಿರುವುದು ಕೇಂದ್ರ ಸರ್ಕಾರಕ್ಕೆ ಧರ್ಮಸಂಕಟ ತಂದಿದ್ದರೂ, ನಾಲ್ಕು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿವೆ. 

ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಪ್ರಮಾಣವನ್ನು ಪ್ರತಿ ಲೀಟರ್‌ಗೆ ಒಂದು ರೂಪಾಯಿಯಷ್ಟು ಇಳಿಸಿದೆ. ಜನವರಿ 29ರಂದು ರಾಜಸ್ಥಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ದರವನ್ನು 38%ದಿಂದ 36%ಕ್ಕೆ ಇಳಿಸಿ, ರಾಜ್ಯ ತೆರಿಗೆ ಇಳಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಚುನಾವಣೆಗೆ ಸಜ್ಜಾಗಿರುವ ಅಸ್ಸಾಂ ಕೂಡಾ ಕಳೆದ ವರ್ಷ ಕೋವಿಡ್-19 ವಿರುದ್ಧದ ಸಮರದ ಅಂಗವಾಗಿ ವಿಧಿಸಿದ್ದ 5 ರೂಪಾಯಿ ಹೆಚ್ಚುವರಿ ತೆರಿಗೆಯನ್ನು ಫೆಬ್ರುವರಿ 12ರಂದು ರದ್ದುಪಡಿಸಿತ್ತು.

ಮೇಘಾಲಯವು ಪೆಟ್ರೋಲ್ ಮೇಲೆ 7.40 ರೂ. ಹಾಗು ಡೀಸೆಲ್ 7.10 ರೂ. ಕಡಿಮೆ ಮಾಡಿದೆ. ಪೆಟ್ರೋಲ್ ಮೇಲಿನ ವ್ಯಾಟ್ 31.62% ರಿಂದ 20% ಮತ್ತು ಡೀಸೆಲ್ ಮೇಲಿನ ವ್ಯಾಟ್ 22.95% ರಿಂದ 12% ಇಳಿಸಲಾಗಿದೆ. ಈ ಮೂಲಕ ಗ್ರಾಹಕರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. 

ಆದರೆ ಕಳೆದ ಮಾರ್ಚ್ ನಿಂದ ಮೇ ಅವಧಿಯಲ್ಲಿ ಅಂದರೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 19.9 ಡಾಲರ್ ಇದ್ದ ಅವಧಿಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಲೀಟರ್‌ಗೆ 13 ರೂಪಾಯಿ ಹಾಗೂ ಡೀಸೆಲ್‌ಗೆ 16 ರೂಪಾಯಿ ಅಬ್ಕಾರಿ ಸುಂಕ ಏರಿಸಿದ್ದು, ಇದನ್ನು ಇಳಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇದರ ಬದಲು ತೈಲ ಆಮದಿನ ಮೇಲಿನ ಅವಲಂಬನೆಯಿಂದಾಗಿ  ಭಾರತದಲ್ಲಿ ದರ ಏರಿಕೆಯ ಬಿಸಿ ಹೆಚ್ಚುತ್ತಿದೆ ಎಂದು ಪ್ರತಿಪಾದಿಸಿದೆ.
ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್ ಬೆಲೆ ಏರಿಕೆ ಸರ್ಕಾರಕ್ಕೆ ಧರ್ಮಸಂಕಟ ಎಂದು ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News