ಇಂಧನ ಬೆಲೆಯೇರಿಕೆಯನ್ನು ಅಣಕಿಸಿದ ಕಾಮಿಡಿಯನ್ ಶ್ಯಾಮ್ ರಂಗೀಲಾ ವಿರುದ್ಧ ಪೆಟ್ರೋಲ್ ಬಂಕ್ ಮಾಲಕನಿಂದ ದೂರು

Update: 2021-02-22 05:21 GMT
ಶ್ಯಾಮ್ ರಂಗೀಲಾ (Twitter)

ಜೈಪುರ್: ಪ್ರಧಾನಿ ನರೇಂದ್ರ ಮೋದಿಯನ್ನು ಅನುಕರಿಸಿ ಹಾಗೂ ಇಂಧನ ಬೆಲೆಯೇರಿಕೆಯನ್ನು ಅಣಕಿಸಿ ತನ್ನ ಪೆಟ್ರೋಲ್ ಬಂಕಿನಲ್ಲಿ ಚಿತ್ರೀಕರಿಸಿದ ವೀಡಿಯೋ ಪೋಸ್ಟ್ ಮಾಡಿದ್ದ ಕಾಮಿಡಿಯನ್ ಶ್ಯಾಮ್ ರಂಗೀಲಾ ವಿರುದ್ಧ ಪೆಟ್ರೋಲ್ ಬಂಕ್ ಮಾಲಕ ಪೊಲೀಸ್ ದೂರು ನೀಡಿದ್ದಾರೆ.

ಶ್ರೀಗಂಗಾನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಚಿತ್ರೀಕರಿಸಲಾಗಿದ್ದ ಹಾಗೂ ರಂಗೀಲಾ ಶೇರ್ ಮಾಡಿದ್ದ ವೀಡಿಯೋ ವೈರಲ್ ಆದ ಬೆನ್ನಿಗೇ  ಬಂಕ್ ಮಾಲಕ ಸುರೇಂದ್ರ ಅಗರ್ವಾಲ್ ಪೊಲೀಸ್ ದೂರು ನೀಡಿದ್ದಾರೆ. ಮೂಲಗಳ ಪ್ರಕಾರ ಸುರೇಂದ್ರ ಅವರ ಬಂಕ್‌ಗೆ ಇಂಧನ ಪೂರೈಕೆ ಮಾಡುವ ಕಂಪೆನಿ ಅವರಿಗೆ ದೂರು ನೀಡುವಂತೆ ಸೂಚಿಸಿತ್ತು. ಸುರೇಂದ್ರ ಅವರು ಸೂಚನೆ ಪಾಲಿಸದೇ ಇದ್ದಲ್ಲಿ ಅವರ ಬಂಕ್‌ಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ  ನಿಲ್ಲಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ ಎಂದು thelallantop.com ವರದಿ ಮಾಡಿದೆ.

ರಂಗೀಲಾ ತಮಗೆ ಕರೆ ಮಾಡಿ ತಾವೊಬ್ಬ ಪತ್ರಕರ್ತ ಎಂದು ಪರಿಚಯಿಸಿದ್ದರು ಹಾಗೂ ಪೆಟ್ರೋಲ್ ಬಂಕ್ ಸಮೀಪ ಫೋಟೋ ತೆಗೆಯಲು ಅನುಮತಿ ಕೋರಿದ್ದರು. "ನಂತರ ಫೆ. 17ರಂದು ಕೆಲ ಜನರು ಬೈಕ್‌ನಲ್ಲಿ ಬಂದಿದ್ದರು, ಬಹಳಷ್ಟು ಜನರು ಅಲ್ಲಿದ್ದುದರಿಂದ ಅವರು ವೀಡಿಯೋ ತೆಗೆಯುತ್ತಿದ್ದರೇ ಎಂದು ತಿಳಿದಿರಲಿಲ್ಲ. ಈ ಪ್ರಕರಣ ಸಂಬಂಧ ಕಂಪೆನಿಯಿಂದ ಕ್ಷಮೆ ಯಾಚಿಸಿದ್ದೇವೆ,'' ಎಂದು ಅವರು ಹೇಳಿದ್ದಾರೆ.

ಈ ನಡುವೆ ರಂಗೀಲಾ ಅವರು ಪ್ರತಿಕ್ರಿಯಿಸಿ ತಾವು ಯಾರದ್ದಾದರೂ ಭಾವನೆಗಳನ್ನು ನೋಯಿಸಿದ್ದೇ ಆದಲ್ಲಿ ಕ್ಷಮೆಯಾಚಿಸಲು ಸಿದ್ಧ ಆದರೆ ಯಾರಿಗಾದರೂ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ, ವೀಡಿಯೋ ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.

"ನನ್ನ ಪ್ರೀತಿಯ ಭಾರತೀಯರೇ, ಪೆಟ್ರೋಲ್ ಬೆಲೆ ರೂ.100 ತಲುಪಿದ ಕಾರಣ ರಾಜಸ್ಥಾನದ ಶ್ರೀಗಂಗಾನಗರ ಬಹಳ ಹೆಮ್ಮೆ ಪಟ್ಟಿದೆ. ಪೆಟ್ರೋಲ್‌ಗೆ ತನ್ನ ನಿಜವಾದ ಮೌಲ್ಯವನ್ನು ಒದಗಿಸುವ ಯಾವುದೇ ಇಂತಹ ಸರಕಾರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಂದಿಲ್ಲ, ನಾವು ಪೆಟ್ರೋಲ್‌ಗೆ ಅದರ ಹಕ್ಕನ್ನು ಕೊಟ್ಟಿದ್ದೇವೆ. ಶ್ರೀಗಂಗಾನಗರ್ ಮಾತ್ರವಲ್ಲ ಇಡೀ ದೇಶಕ್ಕೆ ಕೂಡ ಇಂತಹ ಅವಕಾಶ ದೊರೆಯಲಿದೆ ಎಂದು ನಿಮಗೆ ಭರವಸೆ ನೀಡಬಲ್ಲೆ.  ದೇಶದ ಪ್ರಯೋಜನಕ್ಕಾಗಿ ನಾವು ಕೂಡ ಪೆಟ್ರೋಲ್ ಅನ್ನು ರೂ.100 ಕ್ಕೆ ಖರೀದಿಸುತ್ತಿದ್ದೇವೆ. ಪೆಟ್ರೋಲ್ ಬೆಲೆ ಹೆಚ್ಚಿಸಿದರೆ ಸಮಸ್ಯೆಯಾಗುತ್ತದೆ ಎಂದು ವಿಪಕ್ಷಗಳು ಹೇಳುತ್ತಿವೆ. ಆದರೆ ನಾನು ಯಾವತ್ತೂ ಹೇಳಿದಂತೆ, ಎಲ್ಲಕ್ಕಿಂತಲೂ ದೇಶ ಮೊದಲು,'' ಎಂದು ತಮ್ಮ ವಿವಾದಿತ ವೀಡಿಯೋದಲ್ಲಿ ರಂಗೀಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News