ತಮಿಳುನಾಡಿನ ಪ್ರತಿಯೊಂದು ಇಂಚು ಪವಿತ್ರ, ನಮ್ಮ ಪಕ್ಷ ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ: ತೇಜಸ್ವಿ ಸೂರ್ಯ

Update: 2021-02-22 07:12 GMT

ದ್ರಾವಿಡ ಮುನ್ನೇಟ್ರ ಕಳಗಮ್ (ಡಿಎಂಕೆ) ಪಕ್ಷವನ್ನು "ಹಿಂದೂ ವಿರೋಧಿ" ಎಂದು ಕರೆದ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥ ತೇಜಸ್ವಿ ಸೂರ್ಯ ಭಾನುವಾರ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಂ.ಕೆ.ಸ್ಟಾಲಿನ್ ಅವರ ಪಕ್ಷವನ್ನು ಸೋಲಿಸುವಂತೆ ಜನರನ್ನು ಆಗ್ರಹಿಸಿದ ಅವರು, "ತಮ್ಮ ಪಕ್ಷವು ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ" ಎಂದು ಹೇಳಿದ್ದಾರೆ.

"ಡಿಎಂಕೆ ಪಕ್ಷವು ಕೆಟ್ಟ ವೈರಸ್ ಆಗಿದ್ದು, ಹಿಂದೂ ವಿರೋಧಿ  ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ತಮಿಳನೂ ಹೆಮ್ಮೆಯ ಹಿಂದೂ. ಇದು ದೇಶದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ಹೊಂದಿರುವ ಪವಿತ್ರ ಭೂಮಿ. ತಮಿಳುನಾಡಿನ ಪ್ರತಿ ಇಂಚು ಪವಿತ್ರವಾಗಿದೆ, ಆದರೆ ಡಿಎಂಕೆ ಹಿಂದೂ ವಿರೋಧಿಯಾಗಿದೆ, ಆದ್ದರಿಂದ ನಾವು ಅದನ್ನು ಸೋಲಿಸಬೇಕು” ಎಂದು ತೇಜಸ್ವಿ ಸೂರ್ಯ ಇಲ್ಲಿ ನಡೆದ ಬಿಜೆವೈಎಂ ರಾಜ್ಯ ಸಮಾವೇಶದಲ್ಲಿ ಹೇಳಿದರು.

ತಮ್ಮ ಪಕ್ಷವು ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಎಂದು ಬಿಜೆಪಿ ಸಂಸದ ಪ್ರತಿಪಾದಿಸಿದರು.

"ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವ ಮತ್ತು ಉತ್ತೇಜಿಸುವ ಏಕೈಕ ಪಕ್ಷವಾಗಿದೆ ಭಾರತೀಯ ಜನತಾ ಪಕ್ಷ. ತಮಿಳು ಬದುಕಬೇಕಾದರೆ ಹಿಂದುತ್ವ ಗೆಲ್ಲಬೇಕು. ಕನ್ನಡ ಗೆಲ್ಲಬೇಕಾದರೆ ಹಿಂದುತ್ವ ಗೆಲ್ಲಬೇಕು. ಬಿಜೆಪಿ ತಮಿಳುನಾಡು ಮತ್ತು ತಮಿಳು ಭಾಷೆಯ ಉತ್ಸಾಹವನ್ನು ಪ್ರತಿನಿಧಿಸುತ್ತದೆ," ಅವರು ಹೇಳಿದರು.

ಡಿಎಂಕೆಗೆ ಕುಟುಂಬ ಪಕ್ಷವಾಗಿದ್ದರೆ, ಬಿಜೆಪಿಗೆ ಪಕ್ಷವೇ ಒಂದು ಕುಟುಂಬವಾಗಿದೆ ಎಂದು ಹೇಳಿದರು.

"ಡಿಎಂಕೆ ಪಕ್ಷದ ಹಿಂದೂ ವಿರೋಧಿ ಸಿದ್ಧಾಂತವನ್ನು ಪ್ರಶ್ನಿಸಬೇಕು. ಅಧಿಕಾರದಲ್ಲಿದ್ದಾಗ ಅವರು ಹಿಂದೂ ಸಂಸ್ಥೆಗಳು ಮತ್ತು ನಂಬಿಕೆಗಳ ಮೇಲೆ ದಾಳಿ ಮಾಡುತ್ತಾರೆ, ಆದರೆ ಅಧಿಕಾರದಿಂದ ಹೊರಬಂದಾಗ ಹಿಂದೂ ಮತಗಳನ್ನು ಬಯಸುತ್ತಾರೆ. ಇದು ಮುಂದುವರಿಯುವುದಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News