ಕೇಂದ್ರ ಆರೋಗ್ಯ ಸಚಿವರ ಸಮ್ಮುಖದಲ್ಲೇ ಪತಂಜಲಿಯ ʼಕೊರೊನಿಲ್‌ʼ ಬಿಡುಗಡೆ: ಭಾರತೀಯ ವೈದ್ಯಕೀಯ ಸಂಘ ಆಕ್ರೋಶ

Update: 2021-02-22 14:09 GMT

 ಹೊಸದಿಲ್ಲಿ,ಫೆ.22: ಬಾಬಾ ರಾಮದೇವ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಕೊರೋನಿಲ್ ಮಾತ್ರೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪ್ರಮಾಣೀಕರಣ ಕುರಿತು ‘ಹಸಿಸುಳ್ಳಿನ’ ಬಗ್ಗೆ ಸೋಮವಾರ ತೀವ್ರ ಆಘಾತವನ್ನು ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಈ ಬಗ್ಗೆ ವಿವರಣೆಯನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಆಗ್ರಹಿಸಿದೆ. ಹರ್ಷವರ್ಧನ ಅವರು ಕೊರೋನಿಲ್ ಮಾತ್ರೆಯನ್ನು ಬಿಡುಗಡೆಗೊಳಿಸಿದ್ದು,ಅದು ಸಾಕ್ಷ್ಯಾಧಾರಿತ ಆಧಾರಿತ ಕೋವಿಡ್-19 ಔಷಧಿಯಾಗಿದೆ ಎಂದು ಪತಂಜಲಿ ಸಂಸ್ಥೆಯು ಹೇಳಿಕೊಂಡಿದೆ.

ಕೋವಿಡ್-19 ಚಿಕಿತ್ಸೆಗಾಗಿ ತಾನು ಯಾವುದೇ ಸಾಂಪ್ರದಾಯಿಕ ಔಷಧಿಯ ಪರಿಣಾಮಕಾರಿತ್ವವನ್ನು ಪುನರ್‌ಪರಿಶೀಲಿಸಿಲ್ಲ ಮತ್ತು ಪ್ರಮಾಣೀಕರಿಸಿಲ್ಲ ಎಂದು ಸ್ಪಷ್ಟಪಡಿಸಿ ಡಬ್ಲುಎಚ್‌ಒ ಟ್ವೀಟಿಸಿರುವ ಹಿನ್ನೆಲೆಯಲ್ಲಿ ಐಎಂಎ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಡಬ್ಲುಎಚ್‌ಒದ ಪ್ರಮಾಣೀಕರಣ ಯೋಜನೆಯ ಮೇರೆಗೆ ಕೊರೋನಿಲ್ ಮಾತ್ರೆಗೆ ಕೋವಿಡ್-19 ಚಿಕಿತ್ಸೆಗೆ ಮೊದಲ ಸಾಕ್ಷ್ಯಾಧಾರಿತ ಔಷಧಿಯಾಗಿ ಆಯುಷ್ ಸಚಿವಾಲಯದ ಪ್ರಮಾಣೀಕರಣ ಲಭಿಸಿದೆ ಎಂದು ರಾಮದೇವ ಫೆ.19ರಂದು ಹರ್ಷವರ್ಧನ್ ಉಪಸ್ಥಿತಿಯಲ್ಲಿ ಹೇಳಿಕೊಂಡಿದ್ದರು.

ಆದರೆ ನಂತರ ಪ್ರಮಾಣೀಕರಣದ ಕುರಿತು ಸ್ಪಷ್ಟನೆಯನ್ನು ನೀಡಿದ್ದ ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು,ಭಾರತ ಸರಕಾರದ ಔಷಧಿಗಳ ಮಹಾನಿಯಂತ್ರಕರು ಕೊರೋನಿಲ್‌ಗೆ ಪ್ರಮಾಣಪತ್ರವನ್ನು ನೀಡಿದ್ದಾರೆ. ಡಬ್ಲುಎಚ್‌ಒ ಯಾವುದೇ ಔಷಧಿಗೆ ಅಂಗೀಕಾರ ನೀಡುವುದಿಲ್ಲ ಎಂದು ಟ್ವೀಟಿಸಿದ್ದರು.

ದೇಶದ ಆರೋಗ್ಯ ಸಚಿವರಾಗಿ ಇಂತಹ ನಕಲಿ,ಅವೈಜ್ಞಾನಿಕ ಉತ್ಪನ್ನವನ್ನು ನೀವು ಇಡೀ ದೇಶದ ಜನತೆಗಾಗಿ ಬಿಡುಗಡೆಗೊಳಿಸಿರುವುದು ಸಮರ್ಥನೀಯವೇ ಎಂದು ಸೋಮವಾರ ಹೇಳಿಕೆಯೊಂದರಲ್ಲಿ ಹರ್ಷವರ್ಧನ ಅವರನ್ನು ಪ್ರಶ್ನಿಸಿರುವ ಐಎಂಎ,ಸದ್ರಿ ಕೊರೋನವೈರಸ್ ನಿರೋಧಕ ಔಷಧಿಯ ತಥಾಕಥಿತ ಕ್ಲಿನಿಕಲ್ ಟ್ರಯಲ್‌ಗಳ ವಿವರಗಳನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದೆ.

ಸಚಿವರು ದೇಶಕ್ಕೆ ಸ್ಪಷ್ಟನೆಯನ್ನು ನೀಡುವ ಅಗತ್ಯವಿದೆ. ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯ ನೀತಿಸಂಹಿತೆಗೆ ಅವರ ರಾಜಾರೋಷ ಅಗೌರವಕ್ಕಾಗಿ ಸ್ವಯಂಪ್ರೇರಿತ ವಿವರಣೆಯನ್ನು ಕೋರುವಂತೆ ಐಎಂಎ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೂ ಪತ್ರ ಬರೆಯಲಿದೆ ಎಂದು ಅದು ತಿಳಿಸಿದೆ.

ಪತಂಜಲಿಯು ಕೆಲವು ಸಂಶೋಧನಾ ದಾಖಲೆಗಳನ್ನೂ ಬಿಡುಗಡೆಗೊಳಿಸಿದ್ದು,ಕೋವಿಡ್-19 ಚಿಕಿತ್ಸೆಯಲ್ಲಿ ಕೊರೋನಿಲ್‌ನ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿಕೊಂಡಿತ್ತು. ಕಳೆದ ವರ್ಷದ ಜೂನ್‌ನಲ್ಲಿ ಕೋವಿಡ್19 ಸಾಂಕ್ರಾಮಿಕ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ಪತಂಜಲಿಯು ತನ್ನ ಕೊರೋನಿಲ್ ಮಾತ್ರೆಗಳನ್ನು ಬಿಡುಗಡೆಗೊಳಿಸಿತ್ತು, ಅದರ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ವೈಜ್ಞಾನಿಕ ಸಾಕ್ಷಾಧಾರಗಳಿಲ್ಲದೆ ಅದು ತೀವ್ರ ಟೀಕೆಗಳನ್ನು ಎದುರಿಸಿತ್ತು. ಕೊರೋನಿಲ್ ಮಾರಾಟಕ್ಕೆ ಆಯುಷ್ ಇಲಾಖೆಯು ಅನುಮತಿ ನೀಡಿರಲಿಲ್ಲ,ಜೊತೆಗೆ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಎಫ್‌ಐಆರ್‌ಗಳೂ ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News